×
Ad

ಓಪಿಎಸ್ ಅನುಷ್ಠಾನಕ್ಕೆ ಸರಕಾರದಿಂದ ಅಗತ್ಯ ಕ್ರಮ : ಡಿ.ಕೆ.ಶಿವಕುಮಾರ್ ಭರವಸೆ

Update: 2025-02-20 22:19 IST

ಬೆಂಗಳೂರು : ಓಪಿಎಸ್(ಓಲ್ಡ್ ಪೆನ್ಷನ್ ಸ್ಕೀಮ್) ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಓಪಿಎಸ್ ಬಗ್ಗೆ ನಾವು ಭರವಸೆ ನೀಡಿದ್ದೆವು. ಅದರಂತೆ ಅದನ್ನು ಜಾರಿಗೆ ತರಲು ಬದ್ದರಾಗಿದ್ದೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ಆದರೆ, ಸ್ವಲ್ಪ ತಾಳ್ಮೆಯಿರಲಿ ಎಂದರು.

ಸರಕಾರದ ರಥ ಎಳೆಯುವವರು ಸರಕಾರಿ ನೌಕರರು. ನೀವು ಇಲ್ಲದಿದ್ದರೆ ಸರಕಾರದ ಚಕ್ರ ಮುಂದಕ್ಕೆ ಸಾಗುವುದಿಲ್ಲ. ನಿಮ್ಮ ಸಂಘ ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ. ಸರಕಾರಿ ಕೆಲಸ ಕೇವಲ ಹುದ್ದೆಯಲ್ಲ. ಅದೊಂದು ಜವಾಬ್ದಾರಿ. ನೀವು ಹೃದಯ ಶ್ರೀಮಂತಿಕೆಯಿಂದ ಜವಾಬ್ದಾರಿ ಸರಿಯಾಗಿ ನಿಭಾಯಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನಾನು 1989ರಿಂದ ವಿಧಾನಸಭೆಯಲ್ಲಿ ಇದ್ದೇನೆ. ಕಾರ್ಯಾಂಗದ ಭಾಗವಾಗಿರುವ ಸರಕಾರಿ ನೌಕರರ ಜವಾಬ್ದಾರಿ ನನಗೆ ಅರಿವಿದೆ. ಪ್ರಜಾಪ್ರಭುತ್ವ, ಸಂವಿಧಾನದ ವ್ಯವಸ್ಥೆಯಲ್ಲಿ ಸರಕಾರಿ ನೌಕರರು, ಸರಕಾರ ಹಾಗೂ ಜನರ ಮಧ್ಯೆ ಸಂಪರ್ಕ ಸೇತುವೆಯಂತೆ ಇದ್ದಾರೆ. ಜನ ದೇವಾಲಯಕ್ಕೆ ತಮ್ಮ ಕಷ್ಟ ಹೇಳಿಕೊಳ್ಳಲು ಹೋಗುವಂತೆ ಜನ ತಮ್ಮ ಸಮಸ್ಯೆಯನ್ನು ಹೊತ್ತು ಸರಕಾರಿ ನೌಕರರ ಬಳಿಗೆ ಬರುತ್ತಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಗುವಿಗೆ ತಾಯಿಯ ಮೇಲೆ ನಂಬಿಕೆ, ಮರಕ್ಕೆ ತನ್ನ ಬೇರಿನ ಮೇಲೆ ನಂಬಿಕೆ. ಪೋಷಕರಿಗೆ ತಮ್ಮ ಮಕ್ಕಳ ಮೇಲೆ ನಂಬಿಕೆ, ಭಕ್ತನಿಗೆ ಭಗವಂತನ ಮೇಲೆ ನಂಬಿಕೆ. ಈ ಸರಕಾರದ ಅಭಿವೃದ್ಧಿ ವಿಚಾರದಲ್ಲಿ ನನಗೆ ಸರಕಾರಿ ನೌಕರರ ಮೇಲೆ ನಂಬಿಕೆ ಇದೆ. ಮನುಷ್ಯನಿಗೆ ನಂಬಿಕೆಗಿಂತ ದೊಡ್ಡ ಗುಣವಿಲ್ಲ. ಅದೇ ರೀತಿ ನಿಮ್ಮೆಲ್ಲರ ನಂಬಿಕೆಯನ್ನು ನಿಮ್ಮ ಸಂಘದ ಅಧ್ಯಕ್ಷರಾದ ಷಡಕ್ಷರಿ ಅವರು ಉಳಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ನಾನು ಕೂಡ ಬಡ ನೌಕರನಂತೆ 38 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಶಾಸಕನಾಗಿ ಸರಕಾರದ ವೇತನ ಪಡೆದಿದ್ದೇನೆ. ನನಗೂ ಪಿಂಚಣಿ ಬರುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನಮ್ಮ ಸಮಾಜ ಸದಾ ಸೇವೆ ಮಾಡುವವರನ್ನು ಗುರುತಿಸುತ್ತದೆ. ನೀವು ಕೂಡ ನಿಮಗೆ ಅವಕಾಶ ಸಿಕ್ಕಾಗ ಸಮಾಜದ ಕೆಲಸ ಮಾಡಬೇಕು. ಮನುಷ್ಯನಲ್ಲಿ ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯುವುದಿಲ್ಲ. ನಾವು ಜನಪ್ರತಿನಿಧಿಗಳು ಹೇಗೆ ಜನರನ್ನು ಪ್ರತಿನಿಧಿಸುತ್ತೇವೆಯೋ ಅದೇ ರೀತಿ, ಎಲ್ಲಾ ಸರಕಾರಿ ನೌಕರರು ರಾಜ್ಯದ ಏಳುವರೆ ಕೋಟಿ ಜನರನ್ನು ಪ್ರತಿನಿಧಿಸುತ್ತೀರಿ. ನೀವೆಲ್ಲರೂ ಜನರ ಸೇವೆ ಮಾಡುವ ಅವಕಾಶ ಪಡೆದಿದ್ದು, ಇದನ್ನು ಸರಿಯಾಗಿ ಮಾಡಬೇಕು. ಆತ್ಮಸಾಕ್ಷಿಗೆ ತೃಪ್ತಿಯಾಗುವಂತೆ ಕೆಲಸ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ನೌಕರರಿಗೆ ಸಲಹೆ ನೀಡಿದರು.

ನಮ್ಮ ಸರಕಾದ ಮೇಲೆ ಎಲ್ಲಾ ವರ್ಗದ ಜನರು ನಂಬಿಕೆ ಇಟ್ಟಿದ್ದಾರೆ. ಜಾತಿ, ಧರ್ಮಗಳ ತಾರತಮ್ಯದ ಮೇಲೆ ನನಗೆ ನಂಬಿಕೆ ಇಲ್ಲ. ಎಲ್ಲಾ ಜಾತಿ, ಸಮುದಾಯಗಳು ಬೇಕು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ನಮ್ಮ ಗುರುಗಳು ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ. ಅವರ ಆಚಾರ ವಿಚಾರ ಅವರದು. ನಾವು ಅದರಲ್ಲಿ ಯಾಕೆ ಮೂಗು ತೂರಿಸಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News