ಮನಮೋಹನ್ ಸಿಂಗ್ ಹೆಸರಿನಲ್ಲಿ ಶಾಶ್ವತ ಯೋಜನೆಗೆ ಚಿಂತನೆ : ಡಿ.ಕೆ.ಶಿವಕುಮಾರ್
ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಯೋಜನೆ ಮಾಡುವ ಕುರಿತು ಹಾಗೂ ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ನಾವು ಮಾಡಬೇಕು ಎನ್ನುವ ಆಲೋಚನೆಯಿದೆ. ಇದಕ್ಕೆ ಯಾವ ರೀತಿ ಹೆಸರನ್ನು ಇಡಬೇಕು ಎಂದು ಮುಂದಿನ ದಿನಗಳಲ್ಲಿ ಆಲೋಚನೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಸಂತಾಪ ಸೂಚನೆ ವೇಳೆ ಮಾತನಾಡಿದ ಅವರು, ದೂರದೃಷ್ಟಿಯ ನಾಯಕ, ಆರ್ಥಿಕ ನೀತಿಗಳ ಮೂಲಕ ಜನಸಾಮಾನ್ಯರ ಹಾಗೂ ದೇಶ ಹಾಗೂ ಬೆಂಗಳೂರು ಜಾಗತಿಕವಾಗಿ ಬೆಳೆಯಲು, ಗುರುತಿಸಿಕೊಳ್ಳಲು ಕೊಡುಗೆ ನೀಡಿದ ವ್ಯಕ್ತಿ ಮನಮೋಹನ್ ಸಿಂಗ್ ಎಂದು ನುಡಿದರು.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ವಿಮಾನ ನಿಲ್ದಾಣ, ಕೋಲಾರ ಕಡೆಯ ಮೇಲ್ಸೆತುವೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅನುದಾನ ನೀಡಿದರು. ನರ್ಮ್ ಯೋಜನೆ ಮುಖಾಂತರ ಬೆಂಗಳೂರಿನ ಅಭಿವೃದಿಗೆ ಸಾಕಷ್ಟು ಅನುದಾನ ನೀಡಿದರು. ಬೆಂಗಳೂರಿನ ಬಗ್ಗೆ ಅಪಾರವಾದ ವಿಶ್ವಾಸವನ್ನು ಹೊಂದಿದ್ದವರು ಡಾ.ಸಿಂಗ್. ಹೃದಯ ಶ್ರೀಮಂತಿಕೆಯಿಂದ ಹಣದ ಸಹಾಯ ಮಾಡಿದ್ದಾರೆ. ಇಲ್ಲಿ ಆದಾಯವೂ ಸಹ ಅದೇ ರೀತಿ ಮರಳಿ ಬರುತ್ತಿತ್ತು. ಈಗ ಐಟಿ- ಬಿಟಿ ರಫ್ತು ಮೂಲಕ ಶೇ.39 ರಷ್ಟು ಆದಾಯ ದೇಶಕ್ಕೆ ಬೆಂಗಳೂರಿನಿಂದ ಬರುತ್ತಿದೆ. ಇಂತಹ ದೂರದೃಷ್ಟಿಯಿಂದ ಸಿಂಗ್ ಅವರು ಬೆಂಗಳೂರಿನ ಅಭಿವೃದ್ದಿಗೆ ಕೊಡುಗೆ ನೀಡಿದ್ದರು ಎಂದು ಅವರು ಹೇಳಿದರು.