ಸ್ಪೀಕರ್ ಖಾದರ್ ಇತಿಹಾಸ ಬರೆಯುತ್ತಿದ್ದಾರೆ: ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ’ ಎಂಬ ಅಂಬೇಡ್ಕರ್ ಮಾತಿನಂತೆ, ಸ್ಪೀಕರ್ ಯು.ಟಿ.ಖಾದರ್ ವಿಧಾನಸೌಧ ಮತ್ತು ಸುವರ್ಣಸೌಧಕ್ಕೆ ವಿಶೇಷ ಮೆರುಗು ನೀಡುವ ಮೂಲಕ ಇತಿಹಾಸ ಸೃಷ್ಟಿಸುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿಧಾನಸಭೆ ಮೊಗಸಾಲೆಯಲ್ಲಿ ವಿಧಾನಸಭೆ ನಡೆದು ಬಂದ ದಾರಿ ಕುರಿತ ಚಿತ್ರಗಳ ಅನಾವರಣಗೊಳಿಸಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬಸವಣ್ಣನವರ ಕಾಲದ ಪ್ರಪಂಚದ ಮೊದಲ ಸಂಸತ್ತು ಅನುಭವ ಮಂಟಪದ ಚಿತ್ರವನ್ನು ಅನಾವರಣಗೊಳಿಸಿದರು ಎಂದು ಸ್ಮರಿಸಿದರು.
150 ವರ್ಷಗಳ ಹಿಂದೆ ನಡೆಯುತ್ತಿದ್ದ ವಿಧಾನಸಭೆ ಕಲಾಪದ ಚಿತ್ರದಿಂದ ಹಿಡಿದು, ನೆಹರು ಅವರು ವಿಧಾನಸೌಧ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಚಿತ್ರವನ್ನು ಪ್ರದರ್ಶಿಸಲಾಗಿದೆ. ಇದು ಸಾರ್ವಜನಿಕರಿಗೂ ಉಪಯೋಗವಾಗಬೇಕು. ಅವರಿಗೂ ಜ್ಞಾನೋದಯವಾಗಬೇಕು, ಇತಿಹಾಸದ ಪರಿಚಯವಾಗಬೇಕು. ಸ್ಪೀಕರ್ ಖಾದರ್ ಅವರು ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ ಎಂದು ನುಡಿದರು.
ಈ ವೇಳೆ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಶಾಸಕರು ಮತ್ತು ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.