×
Ad

ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ : ಡಿ.ಕೆ.ಶಿವಕುಮಾರ್

Update: 2026-01-06 18:53 IST

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಐವತ್ತು ವರ್ಷ ತುಂಬಿದ್ದು, ಈ ವರ್ಷದಿಂದಲಾದರೂ ಬಿಡಿಎ ಘನತೆ ಬದಲಾಯಿಸಿ. ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕವನ್ನು ತೆಗೆದುಹಾಕಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.

ಮಂಗಳವಾರ ನಗರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಸುಧಾರಣೆಗಳು, ಸಾರ್ವಜನಿಕ ಅಹವಾಲು ನಿರ್ವಹಣೆ ಕುರಿತು ಬಿಡಿಎ ನೌಕರರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮಗೆ ಏನು ತರಬೇತಿ ನೀಡುತ್ತಾರೆ ಎಂದು ನೀವು ಅಚ್ಚರಿಯಾಗಬಹುದು. ನಾವು ಎಷ್ಟೇ ಬುದ್ಧಿವಂತರಾದರೂ ಜ್ಞಾನ, ಅನುಭವದ ಮೂಲಕ ಸಾಯುವವರೆಗೂ ಕಲಿಯುವ ಅಗತ್ಯವಿರುತ್ತದೆ. ಹೊಸ ತಲೆಮಾರು, ಹೊಸ ವ್ಯವಸ್ಥೆ ಬರುತ್ತದೆ. ನಾವು ಅಂಕಿಗಳನ್ನು ಗುಣಿತ ಮಾಡುತ್ತಿದ್ದೆವು, ನಂತರ ಕ್ಯಾಲ್ಕುಲೇಟರ್ ಬಂದಿತು. ನಂತರ ಕಂಪ್ಯೂಟರ್, ಈಗ ಕೃತಕ ಬುದ್ಧಿಮತ್ತೆ ಕಾಲ ಬಂದಿದೆ. ಈಗ ಭೂ ಮಾಪನವನ್ನು ಟೇಪ್ ಹಿಡಿದು ಮಾಡುವ ಅಗತ್ಯವಿಲ್ಲ, ಡ್ರೋನ್ ಮೂಲಕವೇ ಅಳತೆ ಮಾಡಬಹುದಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ನಿಮ್ಮಲ್ಲಿ ನಡೆಯುತ್ತಿರುವ ಸಂತೆ, ದಂಧೆ, ಏಜೆಂಟ್‍ಗಳ ಪಟ್ಟಿ ಪಡೆಯಲು ನನಗೆ ಆರು ತಿಂಗಳು ಬೇಕಾಯಿತು. ಪ್ರತಿ ಹಂತದಲ್ಲಿ ಎಷ್ಟು ಕೊಳಕಿದೆ, ಎಷ್ಟು ಒಳ್ಳೆಯದಿದೆ ಎಂಬುದನ್ನು ಅರಿತಿದ್ದೇನೆ. ಹೀಗಾಗಿ ಎಲ್ಲ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಲು ತೀರ್ಮಾನಿಸಿದ್ದೇನೆ. ಕೇವಲ ಶೇ.10ರಷ್ಟು ಮಂದಿಯ ನಡವಳಿಕೆಯಿಂದ ಇಡೀ ಬಿಡಿಎಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಅವರು ತಿಳಿಸಿದರು.

ಬಿಡಿಎ ಹಾಗೂ ಜಿಬಿಎ(ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಬೆಂಗಳೂರಿನ ಮುಖವಾಣಿ. ಅಂತರ್‍ರಾಷ್ಟ್ರೀಯ ಮಟ್ಟದಲ್ಲಿರುವ ಬೆಂಗಳೂರಿಗೆ ನಿಮ್ಮ ಶಿಸ್ತು ಹಾಗೂ ಪ್ರಾಮಾಣಿಕತೆ ಅಗತ್ಯವಿದೆ. ಇವು ಇಲ್ಲವಾದರೆ ಯಾರು ಏನು ಮಾಡಲು ಸಾಧ್ಯವಿಲ್ಲ. ನೀವು ಪ್ರತಿ ಕಡತಗಳನ್ನು ಕೊಕ್ಕೆ ಹಾಕಿ ಓಡಾಡಿಸುವ ಬದಲು ಸಕಾರಾತ್ಮಕ ಮನೋಭಾವದಲ್ಲಿ ಪರಿಹಾರ ಹುಡುಕಿ ಎಂದು ಅವರು ಹೇಳಿದರು.

ತಪ್ಪು ಮಾಡಿ ನನ್ನ ಕಣ್ಣಿಗೆ ಬೀಳಬೇಡಿ: ತಪ್ಪು ಮಾಡಿ ನನ್ನ ಕಣ್ಣಿಗೆ ಬೀಳಬೇಡಿ. ಬಿದ್ದರೆ ಬಡಿದು ಬಿಸಾಕುತ್ತೇನೆ. ಕೇಸು ದಾಖಲಿಸಿದ ಬಳಿಕ, ಯಾರಿಂದ ಶಿಫಾರಸ್ಸು ತಂದರೂ ನಾನು ಬಗ್ಗುವುದಿಲ್ಲ. ಬಿಡಿಎ, ಬಿಎಂಆರ್‍ಡಿಎ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದೇ ತಿಂಗಳು 17ಕ್ಕೆ ಬಿಡಿಎ ರಚನೆಯಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಈ ಸಂಭ್ರಮಾಚರಣೆ ವೇಳೆ ಹೆಗ್ಗುರುತು ಬಿಟ್ಟು ಹೋಗಬೇಕೆಂಬುದು ನನ್ನ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್ ಅವರ ತಂಡದ ಅಭಿಲಾಶೆಯಾಗಿದೆ ಎಂದು ಶಿವಕುಮಾರ್ ಹೇಳಿದರು.

ನಿಮ್ಮ ಬಳಿಗೆ ನಾಗರಿಕರು ಬಂದಾಗ ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಬೇಕು. ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುತ್ತಾ ಹೋದರೆ, ಆಗುವುದಿಲ್ಲ. ಸಮಸ್ಯೆಗಳಿಗೆ ನೀವು ದಾರಿ ಹುಡುಕಬೇಕು. ಉದಾರ ಮನಸ್ಸಿನಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ. ನಿಮ್ಮಲ್ಲಿ ಅಧಿಕಾರ ಇದ್ದಾಗ ನೀವು ಬೇರೆಯವರಿಗೆ ಸಹಾಯ ಮಾಡಿ, ತೊಂದರೆ ಮಾಡಬೇಡಿ ಎಂದು ಉಪ ಮುಖ್ಯಮಂತ್ರಿ ಬುದ್ಧಿಮಾತು ಹೇಳಿದರು.

ಇನ್ನು ನಗರ ಯೋಜನೆಗೆ ಸಿವಿಲ್ ಹಾಗೂ ಆರ್ಕಿಟೆಕ್ಚರ್ ಇಂಜಿನಿಯರ್ ಹೊರತಾಗಿ ಬೇರೆ ಇಂಜಿನಿಯರ್ ಗಳು ಬರುತ್ತಿದ್ದಾರೆ. ಹೀಗಾಗಿ ಕೆಂಪೇಗೌಡ ಪ್ರಾಧಿಕಾರದ ಜಾಗದಲ್ಲಿ ವಿಟಿಯು ಮೂಲಕ ಬೆಂಗಳೂರಿನಲ್ಲಿ ನಗರ ಯೋಜನೆ(ಟೌನ್ ಪ್ಲಾನಿಂಗ್) ಕಾಲೇಜು ಆರಂಭಿಸಲು ಮುಂದಾಗಿದ್ದೇನೆ. ಕೇವಲ ಬೆಂಗಳೂರು ನಗರದ ಅಕ್ಕಪಕ್ಕ ಮಾತ್ರವಲ್ಲ ಎಲ್ಲೆಡೆ ಸಂಚಾರಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಪ್ಲಾನಿಂಗ್ ವಿಚಾರದಲ್ಲಿ ಮೈಸೂರು ಬೆಂಗಳೂರಿಗಿಂತ ಉತ್ತಮವಾಗಿದೆ ಎಂದು ಅವರು ಹೇಳಿದರು.

2010ರಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಮಾಡಲು ಮುಂದಾಗಿದ್ದರು. ನಂತರ ರಾಜಕಾರಣಿಗಳು ಹಾಗೂ ಆಯುಕ್ತರು ಸರಿಯಾಗಿ ನಿರ್ಧಾರ ಮಾಡಿದ್ದರೆ 26 ಸಾವಿರ ಕೋಟಿ ರೂ.ಗಳಲ್ಲಿ ಆಗುತ್ತಿತ್ತು. ಆದರೆ ಈಗ ಎರಡೂ ರಸ್ತೆ ನಿರ್ಮಾಣಕ್ಕೆ 50 ಸಾವಿರ ಕೋಟಿ ರೂ. ಬೇಕಾಗುತ್ತದೆ. ಭೂಸ್ವಾಧೀನಕ್ಕೆ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ನಾನು ಭೂ ಸಂತ್ರಸ್ತರಿಗೆ ಪರಿಹಾರ ನೀಡಲು ಅನೇಕ ಆಯ್ಕೆಗಳನ್ನು ನೀಡಿದ್ದೇವೆ. ಈ ರಸ್ತೆಯನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ವಾಸಯೋಗ್ಯ ಮನೆ, ನೀರಿನ ಸಂಪರ್ಕ, ಸಂಚಾರಯುಕ್ತ ರಸ್ತೆ ನೀಡಬೇಕು. ಇದನ್ನೇ ಜನ ನಿಮ್ಮಿಂದ ಅಪೇಕ್ಷೆಪಡುತ್ತಿದ್ದಾರೆ. ಜನ ಟೀಕೆ ಮಾಡುತ್ತಾರೆ. ನನ್ನ ವಿರುದ್ಧ ವಿರೋಧ ಪಕ್ಷದವರು ಹಾಗೂ ಇತರರು ಟೀಕೆ ಮಾಡುತ್ತಿದ್ದು, ಮಾಡಲಿ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ಜಿಬಿಎ ರಚಿಸಿ ಐದು ಪಾಲಿಕೆ ಮಾಡಿದ್ದೇನೆ. ಬೆಂಗಳೂರಿನ ಸುತ್ತಮುತ್ತ ಪ್ರದೇಶ ಬೆಳೆಯುತ್ತಿದೆ. ಅವುಗಳ ಪಟ್ಟಿ ಮಾಡುತ್ತಿದ್ದೇನೆ. ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News