×
Ad

ಗ್ರಾಮೀಣ ಭಾಗದ ಯುವಕರಿಗೆ ಕ್ರೀಡಾ ಉತ್ತೇಜನಕ್ಕೆ ವಿಶೇಷ ಕಾರ್ಯಕ್ರಮ : ಡಾ.ಜಿ.ಪರಮೇಶ್ವರ್

Update: 2026-06-09 22:38 IST

ಬೆಂಗಳೂರು : ಗ್ರಾಮೀಣ ಮತ್ತು ಪಾರಂಪರಿಕ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಯುವಕರಿಗೆ ಉತ್ತೇಜನ ನೀಡಲು ವಿಶೇಷ ಕಾರ್ಯಕ್ರಮ ರೂಪಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಅವರು, ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರಿಗೆ ಸೂಕ್ತ ತರಬೇತಿ, ಆರ್ಥಿಕ ನೆರವು ಮತ್ತು ಸ್ಪರ್ಧಾತ್ಮಕ ಅವಕಾಶಗಳನ್ನು ಒದಗಿಸಿದರೆ ರಾಷ್ಟ್ರೀಯ ಹಾಗೂ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ರಾಜ್ಯದ ಸಾಂಪ್ರದಾಯಿಕ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರಕಾರದಿಂದ ನೀಡಲಾಗುವ ವಿವಿಧ ಪ್ರಶಸ್ತಿಗಳ ಕುರಿತು ಸಭೆಯಲ್ಲಿ ಚರ್ಚಿಸಿದ ಉಪ ಮುಖ್ಯಮಂತ್ರಿ, ಸಾಧಕರಿಗೆ ನೀಡಬೇಕಿರುವ ಕ್ರೀಡಾ ಪ್ರಶಸ್ತಿಗಳನ್ನು ಯಾವುದೆ ಕಾರಣಕ್ಕೂ ಬಾಕಿ ಉಳಿಸಬಾರದು. ಅರ್ಹ ಕ್ರೀಡಾಪಟುಗಳನ್ನು ಪಾರದರ್ಶಕವಾಗಿ ಗುರುತಿಸಿ, ಪ್ರಶಸ್ತಿಗಳನ್ನು ನೀಡುವ ಮೂಲಕ ಅವರ ಸಾಧನೆಯನ್ನು ಗೌರವಿಸುವ ಕೆಲಸವಾಗಬೇಕು. ಇದು ಇತರ ಯುವ ಕ್ರೀಡಾಪಟುಗಳಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಒಲಿಂಪಿಕ್, ಏಷ್ಯನ್ ಗೇಮ್ಸ್, ಕಾಮನ್‍ವೆಲ್ತ್ ಗೇಮ್ಸ್ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ ವಿವಿಧ ಇಲಾಖೆಯಲ್ಲಿನ ಹುದ್ದೆಗಳಿಗೆ ನೇಮಕ ಮಾಡುವ ಮೂಲಕ, ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದು ಸರಕಾರದ ಜವಾಬ್ದಾರಿ ಎಂದು ಪರಮೇಶ್ವರ್ ತಿಳಿಸಿದರು.

ಮುಜರಾಯಿ ಇಲಾಖೆಯ ಆಡಳಿತಾತ್ಮಕ ವಿಚಾರಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿದ ಅವರು, ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ನಿರ್ವಹಣೆ, ಭಕ್ತರಿಗೆ ಒದಗಿಸಲಾಗುತ್ತಿರುವ ಸೌಕರ್ಯಗಳು ಹಾಗೂ ಇಲಾಖೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಬೇಕು ಎಂದು ಹೇಳಿದರು.

ಖಾಲಿ ಇರುವ 235 ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಬೇಕು. ಈ ನಿಟ್ಟಿನಲ್ಲಿ ಇಲಾಖೆಯ ಎಲ್ಲ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕುಮಾರ್, ಸರಕಾರಿ ವೈಮಾನಿಕ ತರಬೇತಿ ಶಾಲೆಯ ನಿರ್ದೇಶಕ ಬಸವರಾಜೇಂದ್ರ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News