×
Ad

ಸಿದ್ದರಾಮಯ್ಯರಿಗೆ ಅಭಿನಂದನೆ, ದೇವರಾಜ ಅರಸು ಅವರಿಗೆ ಹೋಲಿಕೆ ಸರಿಯಲ್ಲ : ಡಾ.ಕೆ.ಸುಧಾಕರ್

Update: 2026-01-06 18:58 IST

ಬೆಂಗಳೂರು : ಸುದೀರ್ಘ ಅವಧಿಯಿಂದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವ ಸಿದ್ದರಾಮಯ್ಯನವರಿಗೆ ಅಭಿನಂದನೆ. ಆದರೆ ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಆಕ್ಷೇಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, 2013ರಲ್ಲಿ ಸಿಎಂ ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡಿದ್ದರು. ಆದರೆ, 2023ರಿಂದ ನೀಡುತ್ತಿರುವ ಆಡಳಿತ ಜನರಿಗೆ ಸಾಕಾಗಿದೆ. ಸಿದ್ದರಾಮಯ್ಯನವರಿಗೆ ಇನ್ನೂ ಸಿಎಂ ಆಗಿರಬೇಕೆಂಬ ಬಯಕೆ ಇದೆ. ಆದರೆ ಈ ಸರಕಾರ ಹೋಗಲಿ ಎಂದೇ ಜನರು ಬಯಸುತ್ತಿದ್ದಾರೆ ಎಂದು ಹೇಳಿದರು.

ದೇವರಾಜ ಅರಸು ತಂದ ಸುಧಾರಣೆಗಳನ್ನು ಬೇರೆ ಯಾರೂ ತಂದಿಲ್ಲ. ಅವರು ಬಡವರಿಗೆ ಭೂಮಿ ನೀಡಿದ್ದರು. ಅವರು ನಿಜವಾದ ಬದ್ಧತೆ ಇದ್ದ ಹಿಂದುಳಿದ ವರ್ಗದ ನಾಯಕ. ಅವರ ದಾರಿಯಲ್ಲಿ ಸಿದ್ದರಾಮಯ್ಯನವರು ನಡೆದಿದ್ದರೆ ಚೆನ್ನಾಗಿರುತ್ತಿತ್ತು. ದೇವರಾಜು ಅರಸು ಜನರ ಬದುಕಿಗೆ ಊಟ ನೀಡಿದ್ದರು. ಒಂದು ಹಬ್ಬಕ್ಕೆ ನೀಡುವ ಊಟಕ್ಕೂ ಜೀವನಕ್ಕೆ ನೀಡುವ ಊಟಕ್ಕೂ ವ್ಯತ್ಯಾಸವಿದೆ ಎಂದು ವಿಶ್ಲೇಷಿಸಿದರು.

ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಮೊದಲಿನಂತೆಯೇ ಪಾರ್ಕಿಂಗ್‌ ಗೆ ಅವಕಾಶ ಕಲ್ಪಿಸಬೇಕು, ಅದಕ್ಕೆ ಪೂರಕವಾಗಿ ನಿಯಮ ರೂಪಿಸಬೇಕು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದು, ಆ ಮೂಲಕ ಟ್ಯಾಕ್ಸಿ ಚಾಲಕರು ಹಾಗೂ ಪ್ರಾಧಿಕಾರದ ನಡುವಿನ ಸಂಧಾನ ಸಭೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭರವಸೆ ಮೂಡಿಸಿದ್ದಾರೆ.

ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಸುಮಾರು 500 ಮೀಟರ್ ದೂರದಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ವಿಮಾನದಿಂದ ಇಳಿದು ಬಂದ ಪ್ರಯಾಣಿಕರು ನಡೆದುಕೊಂಡು ಹೋಗಿ ಟ್ಯಾಕ್ಸಿ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಾಧಿಕಾರದ ಈ ಹೊಸ ಪಾರ್ಕಿಂಗ್ ನಿಯಮದ ವಿರುದ್ಧ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದ್ದರು. ಟ್ಯಾಕ್ಸಿ ಚಾಲಕರ ಸಂಘದ ಮನವಿಯ ಮೇರೆಗೆ ಸುಧಾಕರ್, ಚಾಲಕರು ಹಾಗೂ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಖಾಸಗಿ ಟ್ಯಾಕ್ಸಿ ಚಾಲಕರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ವಾರದಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ. ಖಾಸಗಿ ಟ್ಯಾಕ್ಸಿ ಚಾಲಕರಲ್ಲಿ ಎಲ್ಲರೂ ಕನ್ನಡಿಗರು ಹಾಗೂ ಸ್ಥಳೀಯ ನಿವಾಸಿಗಳು ಆಗಿದ್ದಾರೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಾಲಕರೇ ಇಲ್ಲಿದ್ದಾರೆ. ಚಾಲಕರಿಗೆ ತೊಂದರೆಯಾಗದಂತೆ ಮೂರು ನಾಲ್ಕು ದಿನಗಳಲ್ಲಿ ಒಂದು ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News