×
Ad

ಮುಖ್ಯಮಂತ್ರಿಯನ್ನು ಭೇಟಿಯಾದ ಡಾ.ರೊನಾಲ್ಡ್ ಕೊಲಾಸೊ

ಎನ್‌ಆರ್‌ಐ ಖಾತೆ, ಪ್ರತ್ಯೇಕ ಸಚಿವರು, ಸಾವಿರ ಕೋಟಿ ಆವರ್ತನ ನಿಧಿಗೆ ಆಗ್ರಹ

Update: 2026-06-09 21:38 IST

ಬೆಂಗಳೂರು : ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣಾ ಹಾಗೂ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಮಂಗಳವಾರ ಭೇಟಿ ಮಾಡಿ ಅನಿವಾಸಿ ಕನ್ನಡಿಗರ ಕುರಿತು ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಇತ್ತೀಚಿಗೆ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪಿಸುವುದಾಗಿ ಘೋಷಿಸಿದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ ಡಾ.ರೊನಾಲ್ಡ್ ಕೊಲಾಸೊ ಅವರು ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿರುವಂತೆ ಪ್ರತ್ಯೇಕ ಅನಿವಾಸಿ ಖಾತೆ, ಪ್ರತ್ಯೇಕ ಸಚಿವರು ಹಾಗು ಸಾವಿರ ಕೋಟಿ ಆವರ್ತನ ನಿಧಿಯನ್ನು ಶೀಘ್ರವೇ ಒದಗಿಸುವಂತೆ ಆಗ್ರಹಿಸಿದರು.

ಆರಂಭದಲ್ಲಿ ಅನಿವಾಸಿ ಸಚಿವಾಲಯವನ್ನು ಮುಖ್ಯಮಂತ್ರಿಗಳ ಅಧೀನದಲ್ಲಿ ಸ್ಥಾಪಿಸಲಾಗುವುದು. ಅದಕ್ಕೆ ಪ್ರತ್ಯೇಕ ಇಲಾಖೆ ಹಾಗೂ ಬಜೆಟ್ ಅನುದಾನ ಇರಲಿದೆ. ಕ್ರಮೇಣ ಅದನ್ನು ಪ್ರತ್ಯೇಕ ಸಚಿವರಿಗೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಅಂತಿಮ ರೂಪ ನೀಡುವಾಗ ಅನಿವಾಸಿ ಕನ್ನಡಿಗರಿಂದಲೂ ಸಲಹೆ ಪಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಡಾ.ರೊನಾಲ್ಡ್ ಕೊಲಾಸೊ ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.

ಪ್ರತ್ಯೇಕ ಖಾತೆ, ಪ್ರತ್ಯೇಕ ಸಚಿವರು ಹಾಗೂ ಸಾವಿರ ಕೋಟಿಯ ಆವರ್ತನ ನಿಧಿಯನ್ನು ನೀಡಬೇಕು ಎಂಬುದು ಅನಿವಾಸಿ ಕನ್ನಡಿಗರ ಬಲವಾದ ಆಗ್ರಹವಾಗಿತ್ತು. ಕಳೆದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಡಾ.ರೊನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳ 43 ಮಂದಿ ಅನಿವಾಸಿ ಕನ್ನಡಿಗರು ಆಗಮಿಸಿ ಸಿಎಂ, ಡಿಸಿಎಂ ಹಾಗೂ ಇತರ ಸಚಿವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿದ್ದರು. ಶೀಘ್ರವೇ ಈ ಭರವಸೆ ಈಡೇರಿಸುವುದಾಗಿ ಸರಕಾರ ಹೇಳಿತ್ತು. ಆದರೆ ಇದೀಗ ಸೆಕ್ರೆಟರಿಯೇಟ್ ಮಾತ್ರ ಘೋಷಣೆ ಆಗಿದೆ. ಈ ಹಿನ್ನೆಲೆಯಲ್ಲಿ ಡಾ.ರೊನಾಲ್ಡ್ ಕೊಲಾಸೊ ಹಾಗೂ ಡಾ. ಆರತಿ ಕೃಷ್ಣಾ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಕೇರಳ ಹಾಗೂ ಪಂಜಾಬ್‌ನಲ್ಲಿ ಎನ್‌ಆರ್‌ಐಗಳಿಗೆ ಪ್ರತ್ಯೇಕ ಸಚಿವಾಲಯವಿದೆ. ಉತ್ತರಪ್ರದೇಶ, ಗುಜರಾತ್, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸರಕಾರಗಳು ಪ್ರತ್ಯೇಕ ಎನ್‌ಆರ್‌ಐ ವಿಭಾಗಗಳನ್ನು ಮಾಡಿವೆ. ನಮ್ಮ ರಾಜ್ಯದಲ್ಲೂ ಎನ್‌ಆರ್‌ಐಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಪ್ರತ್ಯೇಕ ಸಚಿವರನ್ನು ನೇಮಿಸುವುದರಿಂದ ಅನಿವಾಸಿ ಕನ್ನಡಿಗರಿಂದ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಬಹುದು. 2024-25 ರಲ್ಲಿ ಅನಿವಾಸಿ ಭಾರತೀಯರಿಂದ ದೇಶಕ್ಕೆ 135.46 ಬಿಲಿಯನ್ ಡಾಲರ್ ಬಂದಿದೆ. ಇದು ಜಗತ್ತಿನಲ್ಲೇ ಅನಿವಾಸಿಗಳಿಂದ ದೇಶಕ್ಕೆ ಬರುವ ಗರಿಷ್ಟ ಮೊತ್ತ. ಇದರಲ್ಲಿ ಕನಿಷ್ಠ 8% ರಾಜ್ಯಕ್ಕೆ ಬರುತ್ತದೆ. ಪ್ರತ್ಯೇಕ ಸಚಿವರು ಇದ್ದರೆ ಅನಿವಾಸಿ ಉದ್ಯೋಗಿಗಳು, ಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಇದರಿಂದ ಪ್ರಯೋಜನವಾಗಲಿದೆ. ಇದರಿಂದ, ರಾಜ್ಯದಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ , ಪ್ರವಾಸೋದ್ಯಮ ಅಭಿವೃದ್ಧಿಗೆ, ಕನ್ನಡ ಭಾಷೆ ಹಾಗು ಸಂಸ್ಕೃತಿಯನ್ನು ಎಲ್ಲೆಡೆ ಪರಿಚಯಿಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಡಾ,ರೊನಾಲ್ಡ್ ಕೊಲಾಸೊ ಅವರು ಮುಖ್ಯಮಂತ್ರಿಯ ಗಮನ ಸೆಳೆದಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಎಲ್.ಕೆ.ಅತೀಕ್‌ ಹಾಗೂ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.






 


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News