ಪೆನ್‍ಡ್ರೈವ್ ಪ್ರಕರಣ : ಕ್ರಮ ಜರುಗಿಸುವಂತೆ ಕೋರಿ ನೈಜ ಹೋರಾಟಗಾರರ ವೇದಿಕೆಯಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ

Update: 2024-04-27 16:46 GMT

Photo : NDTV

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ವಿಕೃತ ಕಾಮಿಯೊಬ್ಬ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ, ಅತ್ಯಾಚಾರ ಮಾಡಿದ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣ ಮತ್ತು ಪೆನ್‍ಡ್ರೈವ್‍ಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಈ ಪ್ರಕರಣದ ಬಗ್ಗೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪೊಲೀಸ್ ಇಲಾಖೆಗೆ ಕ್ರಮ ವಹಿಸಲು ಆದೇಶವನ್ನು ನೀಡಬೇಕು ಎಂದು ಕೋರಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಿಗೆ ನೈಜ ಹೋರಾಟಗಾರರ ವೇದಿಕೆಯು ಪತ್ರ ಬರೆದಿದೆ.

ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ಕ್ರಿಯೆಗಳ ವಿಡಿಯೋಗಳನ್ನು ವಿಕೃತಕಾಮಿಯೊಬ್ಬ ಸಾಮಾಜಿಕ ಜಾಲತಾಣ, ವಾಟ್ಸಪ್ ಮತ್ತು ಪೆನ್ ಡ್ರೈವ್‍ಗಳ ಮೂಲಕ ವಿತರಿಸಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ವಿಷಯ ಬೆಳಕಿಗೆ ಬಂದ ತಕ್ಷಣ ಕೆಲ ಸಂಘಟನೆಗಳು ಸರಕಾರದ ಗಮನಕ್ಕೆ ತಂದರೂ, ಸರಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದೆ.

ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯೋರ್ವಳಿಗೆ ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ ಪ್ರಕರಣದ ವಿಚಾರಣೆ ಮಾಡಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಮೌಕಿಕವಾಗಿ ‘ಸಮಾಜದಲ್ಲಿ ಇಂತಹ ಕೃತ್ಯಗಳನ್ನು ನಡೆಯುತ್ತಿರುವುದನ್ನು ನೋಡಿಯೂ ನೋಡದಂತೆ ಸುಮ್ಮನಾಗಿರುವವರ ಬಗ್ಗೆ ಅಕ್ರೋಶವನ್ನು ಹೊರಹಾಕಿ ಅಂತಹ ವ್ಯಕ್ತಿಗಳ ವಿರುದ್ಧ ಯಾಕೆ ಕ್ರಮ ಜರುಗಿಸಬಾರದು’ ಎಂದು ಸರಕಾರವನ್ನು ಪ್ರಶ್ನೆ ಮಾಡಿತು. ಸಮಾಜದಲ್ಲಿ ಮಹಿಳೆಯರಿಗೆ ಆಗುತ್ತಿರುವ ದೌರ್ಜನ್ಯ ಶೋಷಣೆ, ಅತ್ಯಾಚಾರ ಜೊತೆಗೆ ಅವರ ಘನತೆಗೆ ಧಕ್ಕೆ ಉಂಟಾಗುತ್ತಿರುವುದನ್ನು ನೋಡಿಯೂ ನೋಡದಂತೆ ಇರಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಪತ್ರವನ್ನು ಬರೆಯುತ್ತಿರುವುದಾಗಿ ವೇದಿಕೆಯು ತಿಳಿಸಿದೆ.

ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಲೈಂಗಿಕ ಕ್ರಿಯೆ ಮಾಡಿದ ವ್ಯಕ್ತಿಯೇ ಸಾವಿರಾರು ವಿಡಿಯೋ ಕ್ಲಿಪ್‍ಗಳನ್ನು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅದನ್ನು ಸಾರ್ವಜನಿಕರಿಗೆ ದೊರೆಯುವಂತೆ ಪೆನ್ ಡ್ರೈವ್‍ಗಳನ್ನು, ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಪ್‍ಗಳಲ್ಲಿ ಕೆಲವು ವ್ಯಕ್ತಿಗಳು ಹರಿಬಿಟ್ಟಿರುತ್ತಾರೆ. ಈ ವಿಷಯವು ಶಾಸಕಾಂಗ, ಕಾರ್ಯಾಂಗದ ಗಮನಕ್ಕೆ ಹೋದರೂ, ಯಾವುದೇ ಕಾನೂನು ಕ್ರಮಗಳನ್ನು ಈವರೆಗೆ ಜರುಗಿಸಿಲ್ಲ ಎಂದು ವೇದಿಕೆ ಹೇಳಿದೆ.

ಈ ಲೈಂಗಿಕ ಕ್ರಿಯೆಯನ್ನು ನಡೆಸಿದ ವ್ಯಕ್ತಿ ಹಾಸನ ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಎಂದು ಸಾಮಾಜಿಕ ಜಾಲತಾಣ ಮಾಧ್ಯಮಗಳು ಹೇಳುತ್ತಿವೆ. ಪೊಲೀಸ್ ಇಲಾಖೆ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಕಠಿಣ ಕಾನೂನುಗಳಾದ ಫೋಕ್ಸೊ ಪ್ರಕರಣಗಳಲ್ಲಿ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಖಂಡಿಸಿದೆ.

ತಾವು ಈ ಪ್ರಕರಣದಲ್ಲಿ ಮಹಿಳೆಯರನ್ನು ಬಳಸಿ ದೌರ್ಜನ್ಯವೆಸಗಿ ಸ್ವತಃ ವಿಡಿಯೋವನ್ನು ಮಾಡಿದವರು ಯಾರು? ಅದನ್ನು ಹರಿಬಿಟ್ಟವರು ಯಾರು? ಎಂಬ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲು ಈ ಮನವಿ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಬೇಕು ಎಂದು ನೈಜ ಹೋರಾಟಗಾರ ವೇದಿಕೆ ಒತ್ತಾಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News