ವಕೀಲ ವೃತ್ತಿಯ ನಿಯಮಾವಳಿ ಉಲ್ಲಂಘನೆ : ದೇವರಾಜೇಗೌಡ ವಿರುದ್ಧ ಕ್ರಮಕ್ಕೆ ದೂರು

Update: 2024-05-08 18:33 GMT

ಬೆಂಗಳೂರು: ವಕೀಲ ದೇವರಾಜೇಗೌಡ ಅವರು ನಿಯಮಾವಳಿಗಳ ವಿರುದ್ಧವಾಗಿ ವಕೀಲ ವೃತ್ತಿಗೆ ಅಗೌರವ ತಂದು ತನ್ನ ಕಕ್ಷಿದಾರ ನೀಡಿದ ಮಾಹಿತಿ ಮತ್ತು ದಾಖಲೆಗಳನ್ನು ಸಾರ್ವಜನಿಕಗೊಳಿಸಿ ಸಮಾಜದಲ್ಲಿ ಅಶಾಂತಿಯುಂಟು ಮಾಡಿರುವುದರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ವಕೀಲರಾದ ಸೂರ್ಯ ಮುಕಂದರಾಜ್ ಹಾಗೂ ಟಿ.ಎಸ್.ಸತ್ಯಾನಂದ ಅವರು ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ತನ್ನ ಕಕ್ಷಿದಾರ ಕಾರ್ತಿಕ್ ಎಂಬುವವರ ಪರವಾಗಿ ವಕಾಲತ್ತು ವಹಿಸಿರುವ ದೇವರಾಜೇಗೌಡ ಅವರು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ, ದಾಖಲೆ ಹಾಗೂ ಕೆಲವು ಡಿಜಿಟಲ್ ಪೆನ್‍ಡ್ರೈವ್, ಸಿಡಿಗಳನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸುವ ಬದಲು ಸಾರ್ವಜನಿಕರವಾಗಿ ಹಂಚಿಕೊಳ್ಳುವ ಮೂಲಕ ವಕೀಲರ ವೃತ್ತಿಯ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೇವರಾಜೇಗೌಡ ಅವರು ಮಾಧ್ಯಮಗಳಲ್ಲಿ ತಿಳಿಸಿರುವಂತೆ ಕಳೆದ ಒಂದೂವರೆ ವರ್ಷಗಳಿಂದ ತಮ್ಮ ಬಳಿ ಸಾಕ್ಷ್ಯ ಹಾಗೂ ಮಾಹಿತಿ ಇಟ್ಟುಕೊಂಡಿದ್ದು, ಯಾವುದೇ ನ್ಯಾಯಾಲಯಕ್ಕೆ ಮಾಹಿತಿಗಳನ್ನು ಸಲ್ಲಿಸದೇ ಕಕ್ಷಿದಾರರ ಗಮನಕ್ಕೆ ತಾರದೇ ತಾವು ಪ್ರತಿನಿಧಿಸುವ ರಾಜಕೀಯ ಪಕ್ಷದ ಮುಖಂಡರುಗಳಿಗೆ ಪತ್ರದ ಮುಖೇನ ಹಂಚಿಕೊಂಡು ರಾಜಕೀಯ ಲಾಭಗಳಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೃತ್ತಿಪರತೆಯನ್ನು ಸ್ವಹಿತಾಸಕ್ತಿಗೆ ಬಳಸಿಕೊಂಡು ಕಕ್ಷಿದಾರನ ಮಾಹಿತಿಗಳನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಂಡಿರುವ ದೇವರಾಜೇಗೌಡರ ವಿರುದ್ಧ ರಾಜ್ಯ ವಕೀಲರ ಪರಿಷತ್ತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News