ಕಾಂಗ್ರೆಸ್‌ ಹೊಗಳಿ ಬಿಜೆಪಿ ತೆಗಳಿದ ಚಕ್ರವರ್ತಿ ಸೂಲಿಬೆಲೆ!

Update: 2024-05-09 13:29 GMT

ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಬಿಜೆಪಿಗಿಂತ ಚೆನ್ನಾಗಿ ಪ್ರಚಾರ ನಡೆಸಿದ್ದು, ಕಾಂಗ್ರೆಸ್‍ಗೆ ಶುಭವಾಗಲಿ’ ಎಂದು ಯುವ ಬ್ರಿಗೇಡ್‍ನ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿ, ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್‍ಗೆ ಶುಭ ಕೋರಿರುವುದು ಅಚ್ಚರಿ ಮೂಡಿಸಿದೆ.

ಸಂಘ ಪರಿವಾರದ ಫೈರ್ ಬ್ಯಾಂಡ್ ಆಗಿಯೆ ಗುರುತಿಸಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ, ನಮೋ ಬ್ರಿಗೇಡ್ ಯಾತ್ರೆಗೆ ಇತಿಶ್ರೀ ಹಾಡಿದ ಬಳಿಕ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿ, ‘ಕೆಲವು ವಿಚಾರ ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ಅದ್ಭುತವಾಗಿ ಕೆಲಸ ಮಾಡಿದ್ದೀರಿ. 2014 ಮತ್ತು 2019ರಲ್ಲಿ ನೀವು ಮಾಡದ ಕಾರ್ಯಗಳನ್ನು ಈ ಚುನಾವಣೆಯಲ್ಲಿ ಚೆನ್ನಾಗಿ ಪ್ರಚಾರ ಮಾಡಿದ್ದೀರಿ. ಈ ನಿಟ್ಟಿನಲ್ಲಿ ನಾನು ನಿಮಗೆ ಶುಭಾಶಯ ತಿಳಿಸುತ್ತೇನೆ’ ಎಂದು ಹೇಳಿದ್ದಾರೆ.

‘ಬಿಜೆಪಿಗರು ಅನೇಕ ಮನೆಗಳಿಗೆ ಭೇಟಿ ನೀಡಿಲ್ಲ. ಬಹುತೇಕ ಕಡೆಗಳಲ್ಲಿ ಬಿಜೆಪಿಗರಿಗೆ ಮನೆ-ಮನೆ ಭೇಟಿ ಸಾಧ್ಯವೇ ಆಗಿಲ್ಲ. ಮನೆ ಮನೆ ಭೇಟಿ ಮಾಡಿ ಪ್ರಚಾರ ಮಾಡುವುದರಲ್ಲಿ ಬಿಜೆಪಿ ಕಾರ್ಯಕರ್ತರು ಅಗ್ರಣ್ಯರು. ಆದರೆ, ಈ ಚುನಾವಣೆಯಲ್ಲಿ ಸಂಪೂರ್ಣವಾಗಿ ಅವರ ಅನುಪಸ್ಥಿತಿ ನಾನು ಗಮನಿಸಿದ್ದೇನೆ’ ಎಂದು ಸೂಲಿಬೆಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಾಂಗ್ರೆಸ್‍ನವರಿಗೆ ಕಾರ್ಯಕರ್ತರು ಇಲ್ಲ. ಆದರೂ ಸ್ವಯಂ ಸೇವಾ ಸಂಸ್ಥೆ (ಎನ್‍ಜಿಒ)ಗಳ ಮೂಲಕ, ಇತರೆ ರೀತಿಯಲ್ಲಿ, ಪ್ರಯತ್ನ ಮಾಡಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್‍ಗಳನ್ನು ಹಂಚುವ ಮೂಲಕ ಉತ್ತಮ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಈ ಚುನಾವಣೆಯ ಫಲಿತಾಂಶ ಏನಾಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು, ನಾನು ಆ ಅಂದಾಜು ಮಾಡಲು ಸಾಧ್ಯವಿಲ್ಲ’ ಎಂದು ಸೂಲಿಬೆಲೆ, ಪರೋಕ್ಷವಾಗಿ ಬಿಜೆಪಿಗೆ ಸೋಲಿನ ಸುಳಿವು ನೀಡಿದ್ದಾರೆ.

‘ಮೋದಿ ಅವರ ಅಲೆ ಮತ್ತು ಗ್ಯಾರಂಟಿ ಕಾರ್ಡ್, ಕಾಂಗ್ರೆಸ್‍ನವರ ಪರಿಶ್ರಮ ಇವೆರಡ ನಡುವೆ ಭರ್ಜರಿ ಹೋರಾಟ ನಡೆಯುತ್ತಿದೆ. ಫಲಿತಾಂಶ ಹೇಗಿರಲಿದೆ ಎಂದು ಕಾದು ನೋಡಬೇಕು. ಜನರು ಉರಿ ಬಿಸಿಲಿನಲ್ಲೂ ಬಂದು ಮತ ಹಾಕಿದ್ದಾರೆ. ಆದರೆ, ಈ ಓಟು ಮೋದಿ ಮೇಲಿನ ಅಭಿಮಾನದ ಮತವೋ ಅಥವಾ ಗ್ಯಾರಂಟಿ ಮೇಲಿನ ಆಸೆಯ ಮತವೋ ಎಂದು ಜೂ.4ರಂದು ತಿಳಿಯಲಿದೆ’ ಎಂದು ಅವರು ವಿಶ್ಲೇಷಣೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News