ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು: ಡಾ.ಮುಹಮ್ಮದ್ ಫಾರೂಕ್ ಪಾಷಾ
ಬೆಂಗಳೂರು : ಸೋಲು ಗೆಲುವುಗಳು ಬದುಕಿನ ಭಿನ್ನಮುಖಗಳಾಗಿದ್ದು, ಇವೆರಡನ್ನು ವಿದ್ಯಾರ್ಥಿಗಳು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳುವುದರ ಮೂಲಕ ಬದುಕಿನ ಸವಾಲುಗಳನ್ನು ಎದುರಿಸಬೇಕು ಎಂದು ಪ್ರಾಧ್ಯಾಪಕ ಡಾ.ಮುಹಮ್ಮದ್ ಫಾರೂಕ್ ಪಾಷಾ ತಿಳಿಸಿದ್ದಾರೆ.
ಬುಧವಾರ ನಗರ ಎಚ್‍ಎಸ್‍ಆರ್ ಬಡಾವಣೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗ ಆಯೋಜಿಸಿದ್ದ ‘ವರ್ಚಸ್ವ-2024’ ಅಂತರ್ ಕಾಲೇಜು ಉತ್ಸವದಲ್ಲಿ ಮಾತನಾಡಿದ ಅವರು, ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಸ್ಪರ್ಧಾ ಮನೋಭಾವ ರೂಢಿಸಿಕೊಳ್ಳಲು ಸಹಕಾರಿ ಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಡಾ.ರಘು.ಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಎಂದು ತಿಳಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ನರ್ಮದಾ, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸಾಲೇಂ ಶ್ರೀವೀಣಾ, ಶ್ರೀಪಾಪಣ್ಣ, ಮಹೇಶ್ವರಿ, ಅಕ್ಷತಾ ಮತ್ತಿತರರು ಉಪಸ್ಥಿತರಿದ್ದರು.