ಬಿಎಂಟಿಸಿ ಚಾಲಕರಿಗೆ ಕೂಡಲೇ ವೇತನ ಪಾವತಿಸಿ : ಜಗದೀಶ್ ಸದಂ
ಬೆಂಗಳೂರು : ಇಲೆಕ್ಟ್ರಿಕ್ ಬಸ್‍ಗಳ ನೆಪದಲ್ಲಿ ಬಿಎಂಟಿಸಿಯನ್ನೆ ಖಾಸಗಿಕರಣಗೊಳಿಸುವುದಕ್ಕೆ ತೀವ್ರ ವಿರೋಧವಿದೆ. ಪ್ರಯಾಣಿಕರು, ಚಾಲಕರು ಹಾಗೂ ನಿರ್ವಾಹಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಕಾರ್ಯನಿರ್ವಹಿಸಬೇಕು. ಇಲೆಕ್ಟ್ರಿಕ್ ಬಸ್ ಪೂರೈಸಿದ ಕಂಪೆನಿಗಳಿಗೆ ಲಾಭ ಮಾಡಿಕೊಡುವುದಕ್ಕಲ್ಲ. ಕೂಡಲೇ ಚಾಲಕರಿಗೆ ವೇತನ ಪಾವತಿಸಬೇಕು ಎಂದು ಆಪ್ ಮುಖಂಡ ಜಗದೀಶ್ ವಿ.ಸದಂ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಸುಮಾರು 600 ಇ-ಬಸ್ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. 3 ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆದರೆ ಈ ಒಪ್ಪಂದದಲ್ಲಿ ಚಾಲಕರು ಮತ್ತು ನಿರ್ವಾಹಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಬಸ್ ಪೂರೈಸಿದ ಸಂಸ್ಥೆಗಳೇ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ನಿರ್ವಾಹಕರ ಹುದ್ದೆಗಳನ್ನು ಸಂಪೂರ್ಣ ಕಡಿತಗೊಳಿಸುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ 136 ಬಸ್‍ಗಳನ್ನು ಖಾಸಗಿ ಸಂಸ್ಥೆಯಿಂದ ಪಡೆದುಕೊಳ್ಳಲಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ಖಾಸಗಿ ಸಂಸ್ಥೆಯೇ ನಿರ್ವಹಿಸುತ್ತಿದೆ. ಕಳೆದ 3 ತಿಂಗಳಿಂದ ಚಾಲಕರಿಗೆ ವೇತನ ನೀಡಿಲ್ಲ. ಕೆಲವು ಚಾಲಕರಿಗೆ ಕೊಟ್ಟಿರುವ ವೇತನದಲ್ಲೂ ನಿಗದಿಗಿಂತ ಕಡಿಮೆ ಕೊಡಲಾಗಿದೆ. ಅಲ್ಲದೆ ಈ ಕಂಪನಿಗಳು ಕಾರ್ಮಿಕರ ಭವಿಷ್ಯ ನಿಧಿ ಹಣವನ್ನು ಸಹ ಪಾವತಿಸದೆ ಮೋಸ ಮಾಡುತ್ತಿವೆ. ತಕ್ಷಣ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.
ಚಾಲಕರಿಗೆ ಕೊಡಲಾಗುತ್ತಿರುವ ವೇತನವೇ ಕನಿಷ್ಟ ಪ್ರಮಾಣದ್ದಾಗಿದೆ. ಅದರಲ್ಲೂ ಕಡಿತ ಮಾಡಿಕೊಡಲಾಗುತ್ತಿದೆ. ಜೊತೆಗೆ ಗ್ಲಾಸ್, ಕಿಟಕಿ ಮತ್ತಿತರ ವಸ್ತುಗಳಿಗೆ ಹಾನಿಯಾದರೆ ಚಾಲಕರ ಸಂಬಳದಿಂದಲೇ ದಂಡ ಪಾವತಿ ಮಾಡಿಕೊಳ್ಳಲಾಗುತ್ತಿದೆ. ಬಿಎಂಟಿಸಿ ಘಟಕದ ಬಸ್‍ಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುತ್ತಿರುವುದು ಸರಿಯಲ್ಲ. ಇ-ಬಸ್ ಖರೀದಿಗೆ ಕೇಂದ್ರದಿಂದ ಸಾಕಷ್ಟು ಅನುದಾನ ಸಿಗುತ್ತಿದ್ದರೂ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದು ಆಕ್ಷೇಪಾರ್ಹ. ಕಂಪನಿಗಳಿಂದ ಇಲೆಕ್ಟ್ರಿಕ್ ಬಸ್‍ಗಳನ್ನು ಬಿಎಂಟಿಸಿ ಸಂಸ್ಥೆ ನೇರವಾಗಿ ಖರೀದಿಸಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.