‘ಬರ’ ಬೆಳೆಹಾನಿಗೆ ಎಕರೆಗೆ 50 ಸಾವಿರ ರೂ.ಪರಿಹಾರ ನೀಡಬೇಕು : ಆರ್.ಅಶೋಕ್
ಬೆಂಗಳೂರು : ‘ಗದಗ ಸೇರಿದಂತೆ ಬರ ಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಡಲಾಗಿರುವ ಉಳಿದ ಎಲ್ಲ ಬರ ಪೀಡಿತ ತಾಲೂಕುಗಳನ್ನು ತಕ್ಷಣವೇ ಬರ ಪೀಡಿತ ಎಂದು ಘೋಷಿಸಬೇಕು. ಜತೆಗೆ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೂ ಎಕರೆಗೆ 50 ಸಾವಿರ ರೂ.ಪರಿಹಾರ ನೀಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನಿಮ್ಮದೇ ಪಕ್ಷದ ಹಿರಿಯ ಶಾಸಕರು ರಾಜೀನಾಮೆ ಬೆದರಿಕೆ ಹಾಕುವ ಸ್ಥಿತಿ ತಂದಿಟ್ಟಿರುವ ನೀವು, ಕೇವಲ ಶೋಕಿ ರಾಜಕಾರಣ ಮಾಡುವುದನ್ನು ಬಿಟ್ಟು ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ರೈತರ ಹೊಟ್ಟೆಗೆ ಪದೇ ಪದೇ ಹೊಡೆಯುತ್ತಿರುವ ಈ ನಿರ್ದಯಿ ಕಾಂಗ್ರೆಸ್ ಸರಕಾರಕ್ಕೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದು ಎಚ್ಚರಿಸಿದ್ದಾರೆ.
‘ಸ್ವಪಕ್ಷದ ಶಾಸಕರೇ ಸರಕಾರದ ರೈತ ವಿರೋಧಿ ಧೋರಣೆಗೆ ಛೀ... ಥೂ... ಅಂತ ಉಗಿಯುತ್ತಿದ್ದಾರೆ. ಅನ್ನದಾತರನ್ನು ಭಿಕ್ಷುಕರಂತೆ ಕಾಣುತ್ತಿರುವ ಈ ಲಜ್ಜೆಗೆಟ್ಟ ಸರಕಾರದ ರೈತ ವಿರೋಧಿ ಧೋರಣೆಗೆ ಸ್ವಪಕ್ಷದ ಹಿರಿಯ ಶಾಸಕರೇ ಕನ್ನಡಿ ಹಿಡಿದಿದ್ದಾರೆ. ಗದಗ ತಾಲೂಕಿನಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದರೂ, ಬೆಳೆ ಹಾನಿಯಾಗಿ ರೈತರು ಕಣ್ಣೀರು ಹಾಕುತ್ತಿದ್ದರೂ, ಈ ತಾಲೂಕನ್ನು ಬರಪೀಡಿತ ಎಂದು ಘೋಷಿಸದೆ ಕಣ್ಣಿಗೆ ಮಣ್ಣೆರಚುತ್ತಿದೆ. ಸ್ವತಃ ಹಿರಿಯ ಶಾಸಕ ಎಚ್.ಕೆ.ಪಾಟೀಲ್, ‘ಅ.10ರೊಳಗೆ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ತಮ್ಮದೇ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ ಎಂದರೆ ಈ ಲಜ್ಜೆಗೇಡಿ ಸರಕಾರ ಎಷ್ಟು ದಪ್ಪ ಚರ್ಮದ್ದು ಅಂತ ನೀವೇ ಊಹಿಸಿಕೊಳ್ಳಿ ಎಂದು ಲೇವಡಿ ಮಾಡಿದ್ದಾರೆ.
‘ಹೆಲಿಕಾಪ್ಟರ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಗದಗಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿದ ಮೇಲೆಯೂ ಬರ ಘೋಷಣೆ ಮಾಡಲು ನಿಮಗೇನು ಅಡ್ಡಿ? ರೈತರಿಗೆ ಪರಿಹಾರ ಕೊಡಲು ನಿಮ್ಮ ಖಜಾನೆಯಲ್ಲಿ ಹಣವಿಲ್ಲವೇ ಅಥವಾ ಉತ್ತರ ಕರ್ನಾಟಕದ ರೈತರ ಎಂದರೆ ನಿಮಗಷ್ಟು ನಿರ್ಲಕ್ಷ್ಯವೇ?’ ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸ್ವಪಕ್ಷದ ಶಾಸಕರೇ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಛೀ... ಥೂ... ಅಂತ ಉಗಿಯುತ್ತಿದ್ದಾರೆ!
— R. Ashoka (@RAshokaBJP) September 21, 2026
ಅನ್ನದಾತರನ್ನು ಭಿಕ್ಷುಕರಂತೆ ಕಾಣುತ್ತಿರುವ ಈ ಲಜ್ಜೆಗೆಟ್ಟ @INCKarnataka ಸರ್ಕಾರದ ರೈತ ವಿರೋಧಿ ಧೋರಣೆಗೆ ಸ್ವಪಕ್ಷದ ಹಿರಿಯ ಶಾಸಕರೇ ಕನ್ನಡಿ ಹಿಡಿದಿದ್ದಾರೆ.
ಗದಗ ತಾಲೂಕಿನಲ್ಲಿ ಶೇಕಡಾ 49%ರಷ್ಟು ತೀವ್ರ ಮಳೆ ಕೊರತೆಯಾಗಿದ್ದರೂ,… pic.twitter.com/hAl7VMIQw1