ಸೌಜನ್ಯಾ ಪ್ರಕರಣ ಸಹಿತ 7 ಕೊಲೆಗಳ ಸಮಗ್ರ ತನಿಖೆಯಾಗಲಿ : ಎಸ್.ಬಾಲನ್
ಬೆಂಗಳೂರು : ಧರ್ಮಸ್ಥಳದ ಸೌಜನ್ಯಾ ಪ್ರಕರಣ ಸಹಿತ ಏಳು ಜನರ ಕೊಲೆ ನಡೆದಿವೆ. ಏಳು ಜನರನ್ನು ಕೊಲೆ ಮಾಡಿದ ಹಂತಕರು ಯಾರು ಎಂಬುದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಹಿರಿಯ ವಕೀಲ ಎಸ್.ಬಾಲನ್ ಆಗ್ರಹಿಸಿದ್ದಾರೆ.
ಶನಿವಾರ ನಗರದ ಸೌಹಾರ್ದ ಸಭಾಂಗಣದಲ್ಲಿ ‘ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ’ಯ ವತಿಯಿಂದ ಆಯೋಜಿಸಿದ್ದ ‘ಸೌಜನ್ಯಾ ಹೋರಾಟ-ಮುಂದೇನು? ಸಮಾಲೋಚನಾ ಸಭೆ’ಯಲ್ಲಿ ಮತ್ತು ‘ಸೌಜನ್ಯಾ ತೀರ್ಪು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸೌಜನ್ಯಾ ಪ್ರಕರಣವನ್ನು ತನಿಖೆ ಮಾಡಿರುವ ಬೆಳ್ತಂಗಡಿ ಇನ್ಸ್ಪೆಕ್ಟರ್ ಭಾಸ್ಕರ್ ರೈ, ಸಿಐಡಿ ಅಧಿಕಾರಿಯಾಗಿದ್ದ ರುದ್ರಮುನಿ ಅವರನ್ನು ಬಂಧಿಸಬೇಕು. ನಿವೃತ್ತರಾಗಿದ್ದರೆ ಪಿಂಚಣಿ, ಗ್ರಾಚ್ಯುಟಿ ಸೇರಿ ಅವರು ಪಡೆದ ಎಲ್ಲಾ ಸೌಲಭ್ಯಗಳನ್ನೂ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಸೌಜನ್ಯಾ ಧರಿಸಿದ್ದ ಒಳ ಉಡುಪು ಮೃತದೇಹ ಬಿದ್ದಿದ್ದ ಸ್ಥಳದಲ್ಲಿ ಇರಲಿಲ್ಲ. ಅದನ್ನು ಕಂಡುಹಿಡಿದು ವಶಪಡಿಸಿಕೊಳ್ಳಬೇಕಾಗಿತ್ತು. ಒಳಉಡುಪು ಸಿಕ್ಕಿದ್ದರೆ ಡಿಎನ್ಎ ಪ್ರೊಫೈಲ್ ಪತ್ತೆಯಾಗುತ್ತಿತ್ತು. ಆದರೆ ಆ ಒಳಉಡುಪನ್ನೇ ವಶಪಡಿಸಿಕೊಂಡಿಲ್ಲ. ಹಾಗಾದರೆ ಇದಕ್ಕೆ ಅಪರಾಧಿ ಯಾರು? ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭಾಸ್ಕರ್ ರೈ ಅವರೇ ಇದಕ್ಕೆ ಮುಖ್ಯ ಅಪರಾಧಿ. ಅವರು ಜೈಲಿಗೆ ಹೋಗಬೇಕು. ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ಸಾಮೂಹಿಕ ಅತ್ಯಾಚಾರಿಗಳನ್ನು, ಕ್ರೂರ ಹಂತಕರನ್ನು ರಕ್ಷಿಸಿದ ಸಂಪೂರ್ಣ ನೇರ ಹೊಣೆ ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಭಾಸ್ಕರ್ ರೈ ಅವರದ್ದೇ ಎಂದು ಹೇಳಿದರು.
ಸೌಜನ್ಯಾಳ ಪಾದರಕ್ಷೆ, ಕೊಡೆ, ಪುಸ್ತಕಗಳನ್ನೂ ವಶಪಡಿಸಿಕೊಂಡಿಲ್ಲ. ಇವೆಲ್ಲವೂ ಅತ್ಯಂತ ಪ್ರಮುಖ ಪುರಾವೆಗಳು. ಮಲ್ಲಿಕ್ ಜೈನ್ ಸಂತೋಷ್ ರಾವ್ನನ್ನು ಹಿಡಿದು ಇನ್ಸ್ಪೆಕ್ಟರ್ ಭಾಸ್ಕರ್ ರೈ ಅವರಿಗೆ ಒಪ್ಪಿಸುತ್ತಾನೆ. ಭಾಸ್ಕರ್ ರೈ ಆತನನ್ನು ಬಂಧಿಸಿ, ಆತನಿಂದ ಸ್ವಯಂ ಹೇಳಿಕೆ ದಾಖಲಿಸಿಕೊಂಡು ಘಟನಾ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಆದರೆ ವೈದ್ಯಕೀಯ ವರದಿಯ ಪ್ರಕಾರ ಇದು ಸಾಮೂಹಿಕ ಅತ್ಯಾಚಾರ ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು. ಸೌಜನ್ಯಾಳ ಪ್ರಕರಣವು ಕೇವಲ ಒಬ್ಬ ವ್ಯಕ್ತಿ ಎಸಗಿದ ಅತ್ಯಾಚಾರ ಮತ್ತು ಕೊಲೆಯಲ್ಲ; ಅದೊಂದು ಪೂರ್ವಯೋಜಿತ ಸಾಮೂಹಿಕ ಅತ್ಯಾಚಾರ. ಅಂದರೆ ಸೌಜನ್ಯಾಳನ್ನು ಆ ಸ್ಥಳದಿಂದ ಅಪಹರಿಸಿದ ಗ್ಯಾಂಗ್ ಬೇರೆಯೇ ಇದೆ ಎಂದು ತಿಳಿಸಿದರು.
ಸಮಾಲೋಚನಾ ಸಭೆಯಲ್ಲಿ ಹೋರಾಟಗಾರ್ತಿ ಕೆ.ಎಸ್.ವಿಮಲಾ, ಜನವಾದಿ ಮಹಿಳಾ ಸಂಘಟನೆಯ ಚಂದ್ರಕುಮಾರಿ, ದೇವಿ ಮತ್ತಿತರರು ಉಪಸ್ಥಿತರಿದ್ದರು.
ಸೌಜನ್ಯಾ ಪರ ಹೋರಾಟ ಹೊಸ ಎಸ್ಐಟಿ ರಚನೆಯಾದ ತಕ್ಷಣ ನಿಲ್ಲುವುದಿಲ್ಲ. ಡಿಐಜಿ ಶಶಿಕುಮಾರ್ ನೇತೃತ್ವದ ಎಸ್ಐಟಿಯಿಂದ ನ್ಯಾಯ ಸಿಗುತ್ತೆ ಎನ್ನುವ ನಂಬಿಕೆ ಇಲ್ಲ. ಶಶಿಕುಮಾರ್, ಧರ್ಮಸ್ಥಳದವರ ಜೊತೆಗೆ ಇರುವಂತಹ ಫೋಟೊಗಳು, ವೀಡಿಯೊಗಳು ಇವೆ. ಅದರ ಜೊತೆಗೆ ಅವರು ಈ ಹಿಂದೆ ಬೇರೆ ಬೇರೆ ತನಿಖೆಗಳಲ್ಲಿ ನಡೆದುಕೊಂಡಂತಹ ರೀತಿ ಕೂಡ ನಮಗೆ ಗೊತ್ತಿದೆ. ಎಸ್ಐಟಿಯಲ್ಲಿರುವ ವೆಂಕಟೇಶ್ ಪ್ರಸನ್ನ, ಅವರ ಮೇಲಿರುವ ಭ್ರಷ್ಟಾಚಾರದ ಆರೋಪಗಳ ದಾಖಲೆಗಳು ನಮ್ಮ ಬಳಿಯಿವೆ.
ನವೀನ್ ಸೂರಿಂಜೆ, ಪತ್ರಕರ್ತ