×
Ad

‘ಕನ್ನಡರಾಮಯ್ಯ’ ಎಂಬ ಮಾರ್ದನಿ ಎಂದಿಗೂ ಜೀವಂತ: ಸಂತೋಷ್ ಲಾಡ್

Update: 2026-05-29 20:48 IST

ಬೆಂಗಳೂರು : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಹೋಗಿರಬಹುದು. ಆದರೆ, ಪ್ರತಿಯೊಬ್ಬ ಕನ್ನಡಿಗರ ಎದೆಯಲ್ಲಿ, ಕನ್ನಡ ರಾಮಯ್ಯ ಎಂಬ ಮಾರ್ದನಿಯಲ್ಲಿ ಅವರ ಮುಂದಾಳತ್ವ ಯಾವತ್ತಿಗೂ ಇರಲಿದೆ. ನಮ್ಮ ನಾಡಿಗೆ, ಸರಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅವರ ಮಾರ್ಗದರ್ಶನ ಶ್ರೀರಕ್ಷೆಯಾಗಿರಲಿದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿರುವ ಅವರು, ನಾಡಿನ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ, ಎಲ್ಲ ಸಮುದಾಯಗಳ ಅಭ್ಯುದಯಕ್ಕೆ ಹಾಗೂ ವಿಶೇಷವಾಗಿ ಕನ್ನಡ ಭಾಷೆಯ ಅಸ್ಮಿತೆಗಾಗಿ ಸಿದ್ದರಾಮಯ್ಯ ಅವರು ಇಟ್ಟ ಹೆಜ್ಜೆ, ತೋರಿಸಿದ ಧೈರ್ಯ ಎಲ್ಲರಿಗೂ ಸದಾ ಸ್ಫೂರ್ತಿ ಎಂದು ಮೆಲುಕು ಹಾಕಿದ್ದಾರೆ.

ನನಗೆ ರಾಜಕಾರಣದ ವ್ಯಾಕರಣ ಹೇಳಿಕೊಟ್ಟು, ಕೈ ಹಿಡಿದು ನಡೆಸಿಕೊಂಡು ಬಂದವರು ಸಿದ್ದರಾಮಯ್ಯನವರು. ರಾಜಕೀಯದ ಪ್ರತಿ ಹೆಜ್ಜೆಯಲ್ಲೂ ನಾನು ಅವರಿಂದ ಕಲಿತ ವಿಷಯಗಳು ಸಾಕಷ್ಟಿವೆ. ಸರಕಾರದ ಪ್ರತಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಲೇಬೇಕು ಎಂಬ ವಿಷಯದಲ್ಲಿ ಅವರಿಗಿರುವ ಬದ್ಧತೆಗೆ ಅವರೊಬ್ಬರೇ ಸಾಟಿ ಎಂದೂ ಅವರು ಉಲ್ಲೇಖಿಸಿದ್ದಾರೆ.

ಸಿದ್ದರಾಮಯ್ಯ ಅವರ ಗರಡಿಯಲ್ಲಿ ಪಳಗಿದವ ನಾನು, ಅವರ ಆಡಳಿತದಲ್ಲಿ ಶಾಸಕ, ಸಚಿವನಾಗಿದ್ದವ ನಾನು, ಅವರೊಟ್ಟಿಗೆ, ಅವರ ಅಣತಿಯಂತೆ ಕರ್ತವ್ಯ ನಿರ್ವಹಿಸಿದವ ನಾನು ಎಂಬುದೇ ನನ್ನ ಪಾಲಿನ ಶಾಶ್ವತ ಸಾರ್ಥಕತೆಗಳಲ್ಲೊಂದು ಎಂದು ಸಂತೋಷ್‌ ಲಾಡ್ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News