ಏಳು ಜನರ ಸರಣಿ ಹತ್ಯೆ ಪ್ರಕರಣ | ಆರೋಪಿ ಇಂದುಶೇಖರ್ ಮಗಳ ವಯಸ್ಸಿನ ಗೊಂದಲ: ಪೊಲೀಸರಿಗೆ ಹೊಸ ಸವಾಲು
ಬೆಂಗಳೂರು: ನಗರದಲ್ಲಿ ನಡೆದಿರುವ ಒಂದೇ ಕುಟುಂಬದ ಏಳು ಜನರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಳಿಸಿರುವ ಪೊಲೀಸರಿಗೆ ಇದೀಗ ಹೊಸ ತಲೆನೋವು ಶುರುವಾಗಿದ್ದು, ಇದನ್ನು ಬಗೆಹರಿಸಿಕೊಳ್ಳಲು ಪೊಲೀಸರು ಕಾನೂನು ತಜ್ಞರ ಮೊರೆ ಹೋಗುವಂತಾಗಿದೆ.
ಕೊಲೆಗಳು ನಡೆದಾಗ ಅಪ್ರಾಪ್ತ ವಯಸ್ಸು, ತನಿಖೆಯ ವೇಳೆ ಪ್ರಾಪ್ತ ವಯಸ್ಸು!
ಆರೋಪಿ ಇಂದುಶೇಖರ್ ಈ ಸರಣಿ ಕೊಲೆಗಳನ್ನು ಎಸಗುವ ವೇಳೆ ಸಹಕರಿಸಿದ ಆರೋಪ ಎದುರಿಸುತ್ತಿರುವ ಆತನ ಮಗಳಿಗೆ ಆಗ 18 ವರ್ಷ ತುಂಬಿರಲಿಲ್ಲ. ಆದರೆ ಈ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ತನಿಖೆಮಾಡಲು ಶುರು ಮಾಡಿದಾಗ ಆಕೆಯ ವಯಸ್ಸು 18 ತುಂಬಿದೆ. ಹೀಗಾಗಿ ಆಕೆಯ ವಿಚಾರಣೆಯನ್ನು ಯಾವ ರೀತಿ ನಡೆಸಬೇಕು ಎಂಬುದು ಪೊಲೀಸರಿಗೆ ಸದ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈಕೆಯ ಮೇಲೆ ಗಂಭೀರ ಆರೋಪಗಳಿವೆ
ಇನ್ನೂ ಇಡೀ ರಾಜ್ಯವನ್ನ ಬೆಚ್ಚಿಬೀಳಿಸಿರುವ ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದುಶೇಖರ್ ಮಗಳ ಮೇಲೂ ಗಂಭೀರ ಆರೋಪಗಳಿವೆ. ತಂದೆ ಕೊಲೆ ಮಾಡಲು ಉದ್ದೇಶಿಸಿದವರನ್ನು ಮನೆಗೆ ಕರೆಸಿರುವುದು, ಅವರಿಗೆ ಬಾಡೂಟ ಮಾಡಿ ಬಡಿಸಿರುವುದು, ಕೊಲೆಯಾದ ಬಳಿಕ ಮೃತದೇಹಗಳನ್ನು ಪ್ಯಾಕ್ ಮಾಡಲು, ಸಾಗಿಸಲು ಸಹಕರಿಸಿರುವಂತಹ ಗಂಭೀರ ಆರೋಪಗಳನ್ನು ಪೊಲೀಸರು ತನಿಖೆಯ ವೇಳೆ ಗುರುತಿಸಿದ್ದಾರೆ.
ಜ್ಯುವೆನಲ್ ಜಸ್ಟೀಸ್ ಬೋರ್ಡ್ ಅನುಮತಿ ಕಡ್ಡಾಯ
ಇನ್ನೂ ಈ ಸರಣಿ ಕೊಲೆಗಳು ನಡೆದಾಗ ಆಕೆಯ ವಯಸ್ಸು 18 ವರ್ಷ ಮೀರದೇ ಇರುವುದರಿಂದ ಅಕೆಯನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಬೇಕಾದರೆ ಪೊಲೀಸರು ಬಾಲ ನ್ಯಾಯಾಲಯ( ಜ್ಯುವೆನೆಲ್ ಜಸ್ಟೀಸ್ ಬೋರ್ಡ್)ದ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸದ್ಯ ಅಕೆಯ ವಯಸ್ಸಿನ ಬಗ್ಗೆ ಮತ್ತಷ್ಟು ದಾಖಲೆಗಳನ್ನ ಧೃಡೀಕರಿಸಿಕೊಳ್ಳುವಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.