ಖಾತೆ ಕ್ಯಾತೆ | ಇದು ಕುಟುಂಬದ ಸಮಸ್ಯೆ, ನಾವು ಬಗೆಹರಿಸಿಕೊಳ್ಳುತ್ತೇವೆ: ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಖಾತೆ ಹಂಚಿಕೆಗೆ ಸಂಬಂಧಿಸಿದ್ದು, ನಮ್ಮ ಕುಟುಂಬದ ಸಮಸ್ಯೆ. ನಾವು ಬಗೆಹರಿಸಿಕೊಳ್ಳುತ್ತೇವೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಖಾತೆ ಹಂಚಿಕೆಗೆ ಸಂಬಂಧಿಸಿ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿಯವರ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ತಡರಾತ್ರಿವರೆಗೂ ಸಮಾಲೋಚನೆ ನಡೆಸಿದ ಬಳಿಕ ಹೋಟೆಲ್ ಬಳಿ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.
ನಾನು ಮುಖ್ಯಮಂತ್ರಿ, ರಾಮಲಿಂಗಾರೆಡ್ಡಿ ಸಚಿವರು. ಆದರೂ ನಾವೆಲ್ಲರೂ ಸ್ನೇಹಿತರು. ರಾಮಲಿಂಗಾರೆಡ್ಡಿ ಪಕ್ಷದ ಹಿರಿಯರು, ಬೆಂಗಳೂರಿನಲ್ಲಿ ಪಕ್ಷ ಉಳಿಸುತ್ತಿರುವವರು. ಪಕ್ಷ ಬೆಳೆಸಲು ಕೆಲಸ ಮಾಡುತ್ತಿರುವವರು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಮಲಿಂಗಾರೆಡ್ಡಿ ಅದೇ ಖಾತೆಯಲ್ಲೇ ಮುಂದುವರಿಯುತ್ತಾರೆಯೇ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಡಿಕೆಶಿ, ‘ನಾವು ಖಾತೆ ವಿಚಾರವಾಗಿ ಏನು ಮಾತನಾಡಿದ್ದೇವೆ?, ಬೇರೆ ಯಾವ ವಿಚಾರವೆಲ್ಲ ಮಾತನಾಡಿದ್ದೇವೆ ಎಂದೆಲ್ಲ ಮಾಧ್ಯಮಗಳ ಮುಂದೆ ಹೇಳಲು ಆಗುತ್ತದೆಯೇ’ ಎಂದು ಮರು ಪ್ರಶ್ನಿಸಿದರು.
ರಾಮಲಿಂಗಾರೆಡ್ಡಿ ಅವರು ಖಾತೆ ಬದಲಾವಣೆಗೆ ಒಪ್ಪಿಕೊಂಡಿದ್ದಾರೆಯೇ ಎಂದು ಕೇಳಿದಾಗ, ಅವರೇನು ಪಕ್ಷ ಬಿಡ್ತೇನೆ ಅಂತ ಹೇಳಿಕೊಂಡಿದ್ದಾರೆಯೇ? ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಒಂದಷ್ಟು ತಪ್ಪು ಸಂವಹನ ಆಗಿದೆ. ಸರಿಪಡಿಸುತ್ತೇವೆ’ ಎಂದರು.