‘ರಾಜ್ಯದ ಆರ್ಥಿಕ ಸ್ಥಿತಿ’ ಬಹಿರಂಗ ಚರ್ಚೆಗೆ ಬನ್ನಿ: ಸಿಎಂಗೆ ವಿಜಯೇಂದ್ರ ಆಹ್ವಾನ
ಬೆಂಗಳೂರು : ‘ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದ್ದರೆ, ಬನ್ನಿ ಪ್ರತಿಜಿಲ್ಲೆಗೂ ಹೋಗೋಣ. ಬಹಿರಂಗ ವೇದಿಕೆಯಲ್ಲಿ ನಿಂತು ನಿಮ್ಮ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ರೈತರು ಮತ್ತು ಶ್ರಮಿಕ ವರ್ಗದ ಕಲ್ಯಾಣ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಜನರ ಮುಂದೆ ಚರ್ಚಿಸೋಣ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆಹ್ವಾನ ನೀಡಿದ್ದಾರೆ.
ಬುಧವಾರ ಈ ಸಂಬಂಧ ಎಕಸ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಆಯವ್ಯಯ ಶ್ವೇತಪತ್ರವಲ್ಲ, ದೀರ್ಘಾವಧಿ ಬಜೆಟ್ ಮಂಡನೆ ಸಾಧನೆಯೂ ಅಲ್ಲ, ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದೇ ನಿಮ್ಮ ಸಾಧನೆ. ‘ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಿ’ ಎಂಬ ನನ್ನ ಹೇಳಿಕೆಯಿಂದ ನೀವು ಸಂಪೂರ್ಣ ವಿಚಲಿತರಾಗಿದ್ದೀರಿ’ ಎಂದು ಹೇಳಿದ್ದಾರೆ.
‘ನಿಮ್ಮ ಸುದೀರ್ಘ ಸ್ಪಷ್ಟನೆಯ ಹಿಂದೆ ನಿಮ್ಮ ಪ್ರಯಾಸ, ಪಡಿಪಾಟಲು ಕಂಡು ಮರುಕುವುಂಟಾಯಿತು. ಹಾಂ, 17 ಬಾರಿ ಬಜೆಟ್ ಮಂಡಿಸಿರುವುದನ್ನೇ ದೊಡ್ಡ ಸಾಧನೆ ಎಂದುಕೊಂಡಿರುವ ನಿಮಗೆ, ಆಯವ್ಯಯಕ್ಕೂ ಮತ್ತು ಶ್ವೇತಪತ್ರಕ್ಕೂ ಇರುವ ವ್ಯತ್ಯಾಸವೇ ತಿಳಿದಿಲ್ಲದಿರುವುದು ರಾಜ್ಯದ ದುರಂತ. ಶ್ವೇತಪತ್ರವೆಂದರೆ ಕಪ್ಪುಚುಕ್ಕೆಯಿಲ್ಲದ ನಿಖರ ಅಂಶಗಳನ್ನು ಜನರ ಮುಂದಿಡುವುದು. ಈ ವ್ಯತ್ಯಾಸ ನಿಮಗೆ ಗೊತ್ತಿಲ್ಲದಿದ್ದರೆ ನಿಮ್ಮ ಇಲಾಖೆಯ ಆರ್ಥಿಕ ತಜ್ಞರಿಂದ ತಿಳಿದುಕೊಳ್ಳಿ’ ಎಂದು ಅವರು ಟೀಕಿಸಿದ್ದಾರೆ.
‘ಇಷ್ಟಕ್ಕೂ ಬಜೆಟ್ ಮಂಡನೆಯೇ ದೊಡ್ಡ ಸಾಧನೆ ಆಗುತ್ತದೆಯೇ?. ಅದು ಹೆಚ್ಚೆಂದರೆ ದಾಖಲೆಯಷ್ಟೇ, ಸಾಧನೆಯಲ್ಲ. ಇಷ್ಟೂ ಬಜೆಟ್‍ನಲ್ಲಿ ಜನ ಶಾಶ್ವತವಾಗಿ ನೆನೆಪಿಸಿಕೊಳ್ಳುವಂತಹ ಯಾವುದಾದರೂ ಜನಪರ ಯೋಜನೆ ಇದಿಯಾ? ಅದನ್ನು ನೀವು ಪಟ್ಟಿ ಮಾಡಿಯೇ ಇಲ್ಲ. ಘೋಷಿಸಿದ್ದರೆ ತಾನೆ ಪಟ್ಟಿ ಮಾಡುವುದು?’ ಎಂದು ಅವರು ಪ್ರಶ್ನಿಸಿದ್ದಾರೆ.
‘ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದು ವಾದಿಸುವ ಸಿಎಂ ಅವರೇ, ಬೆರಳೆಣಿಕೆಯಷ್ಟಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲು ಪಿಂಚಣಿ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದು ಯಾಕೆ?. ನಿಮ್ಮ ಅಂಕಿ- ಅಂಶಗಳು ಕೇವಲ ಕಾಗದದ ಮೇಲಿವೆ, ವಾಸ್ತವದಲ್ಲಿ ಖಜಾನೆ ಖಾಲಿಯಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?. ಇಡೀ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಕುಖ್ಯಾತಿ ಈ ಸರಕಾರಕ್ಕೆ ಸಲ್ಲುತ್ತದೆ. ಕೇಂದ್ರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನವನ್ನು ಜನರು ನಂಬುವುದಿಲ್ಲ.
ಜಿಎಸ್‍ಟಿ ಪಾಲು ಮತ್ತು ಅನುದಾನ ಪಡೆಯಲು ಸಮರ್ಪಕ ವರದಿ ಸಲ್ಲಿಸುವಲ್ಲಿ ವಿಫಲವಾಗಿರುವ ನಿಮ್ಮ ಸರಕಾರ, ತನ್ನ ದೋಷಪೂರಿತ ನಿರ್ಧಾರಗಳನ್ನು ಮುಚ್ಚಿಹಾಕಲು ಕೇಂದ್ರದತ್ತ ಬೆರಳು ಮಾಡುತ್ತಿದೆ. ನೀವು ಮಾಡಿರುವ ಒಟ್ಟು ಸಾಲದ ಮೊತ್ತ 8.14ಲಕ್ಷ ಕೋಟಿ ರೂ.ಗಡಿ ದಾಟಿದೆ. 2025-26ನೇ ಆರ್ಥಿಕ ವರ್ಷದಲ್ಲಿ 48ಸಾವಿರ ಕೋಟಿ ರೂ.ಬಡ್ಡಿ ಪಾವತಿಸಿದ್ದೀರಿ. ಸಾಲದ ಮೊತ್ತ ಏರುತ್ತಲೇ ಇದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಇದು ಆರ್ಥಿಕ ದಿವಾಳಿತನವಲ್ಲವೇ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ರೈತರಿಗೆ ‘ಘೋಷಣೆ' ಭಾಗ್ಯ ಮಾತ್ರ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡು ಮುಳುಗಡೆ ಸಂತ್ರಸ್ತರಾದ ರೈತರಿಗೆ ಪರಿಹಾರ ನೀಡುವುದಾಗಿ ದೊಡ್ಡದಾಗಿ ಘೋಷಿಸಿದಿರಿ. ಆದರೆ ಈವರೆಗೂ ಆ ಭರವಸೆ ಈಡೇರಿಲ್ಲ. ಅನ್ನದಾತನ ಹೊಟ್ಟೆ ಮೇಲೆ ಹೊಡೆಯುತ್ತಿರುವ ನಿಮಗೆ ಆರ್ಥಿಕತೆಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?’
-ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ