ಕಾಂಗ್ರೆಸ್ ವಿರುದ್ಧ ಏಕವಚನ ಪದ ಬಳಕೆಗೆ ವಿಜಯೇಂದ್ರ ಕ್ಷಮೆ ಯಾಚನೆ
ಯಾರನ್ನೂ ಉದ್ದೇಶಪೂರ್ವಕವಾಗಿ ನೋಯಿಸುವ ಆಲೋಚನೆ ಇರಲಿಲ್ಲ ಎಂದ ಬಿಜೆಪಿ ರಾಜ್ಯಾಧ್ಯಕ್ಷ
PC: x.com/BYVijayendra
ಬೆಂಗಳೂರು: "ಕಳೆದ ವಾರ ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶದಿಂದ ಮಾತನಾಡಿದ್ದೇನೆ. ನನ್ನ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ. ಯಾರನ್ನೂ ಉದ್ದೇಶಪೂರ್ವಕವಾಗಿ ನೋಯಿಸುವ ಆಲೋಚನೆ ಇರಲಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಅವರು ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.
ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ ವಿಚಾರ ಹಾಗೂ ಹಾಲಿನ ದರ ಏರಿಕೆಯ ಕುರಿತು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ, ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, "ಈ ನನ್ ಮಕ್ಕಳು ಕಾಂಗ್ರೆಸ್ ನವರು ಇದ್ದಾರಲ್ಲಾ..." ಎಂದು ಏಕವಚನದಲ್ಲಿ ಟೀಕಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಇದೀಗ ಆಕ್ರೋಶದಿಂದ ಮಾತನಾಡಿದ್ದೇನೆಯೇ ಹೊರತು ಉದ್ದೇಶಪೂರ್ವಕವಾಗಿರಲಿಲ್ಲ, ನನ್ನ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಸಹಿಸಲಾಗದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡರು ದೇಶದಲ್ಲಿನ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮತ್ತೊಂದೆಡೆ ಹಾಲಿನ ದರ ಏರಿಕೆ ಮಾಡಿ ಕಾಂಗ್ರೆಸ್ ಸರ್ಕಾರ ಜನರ ಬದುಕಿಗೆ ಬರೆ ಎಳೆದಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಮೋದಿಜಿ ಅವರ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಅನ್ಯಾಯದ ಮಾರ್ಗದಿಂದ ಎಂಬಂತೆ ಇವರು ಬಿಂಬಿಸುತ್ತಿದ್ದಾರೆ. ಆದರೆ ದೇಶದ ಜನರೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿದ್ದಾರೆ. ಇದನ್ನು ತಿಳಿಯದ ಅವರು ಗೊಂದಲ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಪ್ರಜಾಪ್ರಭುತ್ವ ವಿರೋಧಿ ನಡೆ ವಿರುದ್ಧ ‘ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿʼ ಜಾಗೃತಿ ಅಭಿಯಾನವನ್ನು ದೇಶದಾದ್ಯಂತ ಆರಂಭಿಸಿದ್ದೇವೆ. ಕರ್ನಾಟಕದಲ್ಲಿ ಕೋಲಾರದಲ್ಲಿ ಚಾಲನೆ ನೀಡಲಾಗುತ್ತಿದೆ. ಈ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಪಕ್ಷದ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕರಾದ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ ಪ್ರಮುಖ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕೆಪಿಎಸ್ಸಿಯಲ್ಲಿ ಸುಧಾರಣೆ ಮಾಡದ ಈ ಕಾಂಗ್ರೆಸ್ ಸರ್ಕಾರ, ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಎರಡೂವರೆ ಲಕ್ಷ ಖಾಲಿ ಹುದ್ದೆಯನ್ನು ಭರ್ತಿ ಮಾಡಲಿಲ್ಲ. ಪರೀಕ್ಷೆ ಬರೆದು ಅಭ್ಯರ್ಥಿಗಳು ವರ್ಷಗಟ್ಟಲೆ ಕಾಯಬೇಕಾಗಿದೆ. ಅವರು ನೋವಿನಿಂದ ಬೀದಿಗಿಳಿಯುವ ಸ್ಥಿತಿ ಎದುರಾಗಿದೆ. ಮೀಸಲಾತಿ ವಿಚಾರದಲ್ಲೂ ಸರಿಯಾಗಿ ವಾದ ಮಂಡನೆ ಮಾಡಲಿಲ್ಲ ಎಂದು ದೂರಿದರು.
ಜನರ ಬದುಕಿಗೆ ಬರೆ ಎಳೆದ ಸರಕಾರ...
ಹಾಲಿನ ದರ ಏರಿಕೆ ಮಾಡಿ ಈ ಸರಕಾರ ರಾಜ್ಯದ ಜನರಿಗೆ ಸರಿಯಾದ ಉಡುಗೊರೆ ನೀಡಿದೆ. ರೈತರಿಗೆ ನೆರವು ನೀಡಲು ಹಾಲಿದ ದರ ಏರಿಕೆ ಮಾಡಿ ಜನರಿಗೆ ಹೊರೆ ಮಾಡುವ ಬದಲು ಸರ್ಕಾರವೇ ಅದನ್ನು ಭರಿಸಬೇಕಿತ್ತು. ಈ ಸರ್ಕಾರಕ್ಕೆ ಮಾನ ಮರ್ಯಾದೆಯೇ ಇಲ್ಲ. ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ರೀತಿ ಇಲ್ಲ. ಇದನ್ನು ಖಂಡಿಸಿ ಜನರೇ ದಂಗೆ ಏಳುವ ಸ್ಥಿತಿ ನಿರ್ಮಾಣವಾಗಿದೆ. ಹಬ್ಬದ ವೇಳೆಯೇ ಏರಿಕೆ ಮಾಡಿರುವುದು ಅಕ್ಷಮ್ಯ ಅಪರಾಧ. ಇದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. ಜನರ ಪರವಾಗಿ ಪಕ್ಷವೇ ಬೀದಿಗಿಳಿಯಲಿದೆ ಎಂದರು.
ಜನರೇ ಪಾಠ ಕಲಿಸಲಿದ್ದಾರೆ...
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏನೇ ನಾಟಕ ಮಾಡಿದರೂ ಎಂಎಲ್ಸಿ ಚುನಾವಣೆ ಗೆಲ್ಲಲು ಆಗಲಿಲ್ಲ. ಅವರು ಅದರಿಂದ ಹತಾಶರಾಗಿದ್ದಾರೆ. ಜನರ ಭಾವನೆ ಕಾಂಗ್ರೆಸ್ ಸರ್ಕಾರದ ವಿರುದ್ಧವಿದೆ ಎಂಬುದನ್ನು ಅವರು ತಿಳಿಯಬೇಕು. ಚುನಾವಣೆಗೂ ಮೊದಲು ನೂರಾರು ಭರವಸೆ ನೀಡದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಂಚನೆ ಮಾಡಿದೆ. ಹಿರಿಯೂರು ಉಪ ಚುನಾವಣೆಯಲ್ಲೂ ಕಾಂಗ್ರೆಸ್ಗೆ ಜನರು ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಕುಮಾರಸ್ವಾಮಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ..
ಸ್ಟಿಂಗ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ. ಕುಮಾರಸ್ವಾಮಿ ಅವರೇ ಹಲವು ವಿಚಾರಗಳನ್ನು ಹೇಳಿದ್ದಾರೆ. ನಿಜವಾದ ಅಪರಾಧಿಗಳು ಯಾರು ಎಂಬ ಬಗ್ಗೆ ಸರಕಾರ ತಲೆಕೆಡಿಸಿಕೊಂಡಿಲ್ಲ. ಸ್ಟಿಂಗ್ ಆಪರೇಷನ್ ಮೂಲಕ ಕಾಂಗ್ರೆಸ್ ಸರಕಾರ ತನ್ನ ಬುಡಕ್ಕೆ ಬೆಂಕಿ ಇಟ್ಟುಕೊಳ್ಳುತ್ತಿದೆ. ಸ್ಟಿಂಗ್ ಅಪರೇಷನ್ ಮುಖ್ಯಮಂತ್ರಿ ಬುಡಕ್ಕೆ ಬಂದು ಬೀಳಲಿದೆ. ಸಿಎಂ ಬದಲಾವಣೆಗೆ ಅವರ ಪಕ್ಷದಲ್ಲೇ ಒತ್ತಡ ಆರಂಭವಾಗಿದೆ ಎಂದು ಹೇಳಿದರು.