ಯೋಗೀಶ ಗೌಡ ಕೊಲೆ ಪ್ರಕರಣ; ವಿನಯ ಕುಲಕರ್ಣಿ ಸಹಿತ 10 ಮಂದಿಗೆ ಹೈಕೋರ್ಟ್ ಜಾಮೀನು
ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೊಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಶಾಸಕ ವಿನಯ ಕುಲಕರ್ಣಿ ಸೇರಿ 10 ಮಂದಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಅಮಾನತಿನಲ್ಲಿಟ್ಟು, ಜಾಮೀನು ನೀಡುವಂತೆ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ, ಚಂದ್ರಶೇಖರ ಇಂಡಿ ಮತ್ತಿತರರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ಕುರಿತ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಹಾಗೂ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು.
ಮಧ್ಯಂತರ ಅರ್ಜಿಗಳನ್ನು ಮಾನ್ಯ ಮಾಡಿರುವ ಹೈಕೋರ್ಟ್, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಕೋರಿ ಸಲ್ಲಿಸಲಾಗಿರುವ ಮೇಲ್ಮನವಿಗಳು ಇತ್ಯರ್ಥವಾಗುವವರೆಗೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿರಿಸಲಾಗಿದ್ದು, ಮೇಲ್ಮನವಿದಾರರನ್ನು ಷರತ್ತುಗಳಿಗೆ ಒಳಪಟ್ಟಂತೆ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಆರೋಪಿಗಳೆಲ್ಲರೂ ತಲಾ 5 ಲಕ್ಷ ರೂ. ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು, ಸಂಪೂರ್ಣ ದಂಡದ ಮೊತ್ತವನ್ನು ವಿಶೇಷ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಭಾರತ ತೊರೆಯುವಂತಿಲ್ಲ. ಹೈಕೋರ್ಟ್ ಹಾಗೂ ವಿಶೇಷ ನ್ಯಾಯಾಲಯ ನಿರ್ದೇಶಿಸಿದಾಗ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕು ಎಂಬ ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.
ಚನ್ನಕೇಶವ ಟಿಂಗರೀಕರಗೂ ಜಾಮೀನು:
ಇನ್ನು ಯೊಗೀಶ ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ತನಿಖಾ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ, ಅಸಲಿ ಸಾಕ್ಷಿಗಳನ್ನು ಮರೆಮಾಚಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಆರೋಪದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅಂದಿನ ಪೊಲೀಸ್ ಇನ್ ಸ್ಪೆಕ್ಟರ್ ಚನ್ನಕೇಶವ ಬಿ. ಟಿಂಗರೀಕರ (ಎ19) ಅವರ ಶಿಕ್ಷೆಯನ್ನೂ ಅಮಾನತಿನಲ್ಲಿಟ್ಟಿರುವ ಹೈಕೋರ್ಟ್, ಜಾಮೀನು ಮಂಜೂರು ಮಾಡಿದ್ದು, ಇತರ ಆರೋಪಿಗಳಿಗೆ ವಿಧಿಸಿರುವ ಷರತ್ತುಗಳನ್ನೇ ಟಿಂಗರೀಕರ ಅವರಿಗೂ ವಿಧಿಸಿದೆ.
ಜಾಮೀನು ಕೋರಿದ್ದವರು:
ಚಂದ್ರಶೇಖರ ಇಂಡಿ (ಎ16), ವಿನಯ ಕುಲಕರ್ಣಿ (ಎ15), ಎಂ. ದಿನೇಶ್ (ಎ8), ಎಸ್. ಅಶ್ವಥ್ (ಎ9), ಕೆ.ಎಸ್. ಸುನೀಲ್ (ಎ10), ನಝೀರ್ ಅಹ್ಮದ್ (ಎ 11), ಶಹನವಾಝ್ (ಎ12), ಕೆ. ನೂತನ್ (ಎ.13), ಸಿ. ಹರ್ಷಿತ್ (ಎ14) ಹಾಗೂ ಚನ್ನಕೇಶವ ಬಿ. ಟಿಂಗರೀಕರ (ಎ19)