ದೊಡ್ಡಬಳ್ಳಾಪುರ: ರೈಲು ಢಿಕ್ಕಿಯಾಗಿ ಅಜ್ಜಿ, ಇಬ್ಬರು ಮೊಮ್ಮಕ್ಕಳು ಮೃತ್ಯು
ರೈಲ್ವೆ ಸ್ಟೇಷನ್ ನಲ್ಲಿ ಹಳಿ ದಾಟುತ್ತಿದ್ದ ವೇಳೆ ಅವಘಡ
ದೊಡ್ಡಬಳ್ಳಾಪುರ, ಆ.31: ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿಯಾಗಿ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಮೃತಪಟ್ಟ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮೃತರನ್ನು ನಗರದ ಪಾಲನಜೋಗಹಳ್ಳಿ ನಿವಾಸಿ ಇರ್ಫಾನಾ(46), ಅವರ ಮೊಮ್ಮಕ್ಕಳಾದ ರುಕಿಯಾ (13) ಮತ್ತು ರಾಕಿಯಾ (8) ಎಂದು ಗುರುತಿಸಲಾಗಿದೆ. ರೈಲು ನಿಲ್ದಾಣದಲ್ಲಿ ಸ್ಕೈ ವಾಕ್ ಇಲ್ಲದ ಕಾರಣ ರೈಲು ಏರುವ ಉದ್ದೇಶದಿಂದ ಹಳಿ ದಾಟುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಶಾಲೆಗೆ ರಜೆ ಇದ್ದ ಕಾರಣ ಹಿಂದೂಪುರದಿಂದ ಮೊಮ್ಮಕ್ಕಳಿಬ್ಬರು ಅಜ್ಜಿಯ ಮನೆಗೆ ಬಂದಿದ್ದರು. ಇಂದು ಬೆಳಗ್ಗೆ ಅಜ್ಜಿ ಜೊತೆ ಊರಿಗೆ ಹಿಂದಿರುಗುವುದಕ್ಕಾಗಿ ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ಹಿಂದೂಪುರ ಪ್ಯಾಸೆಂಜರ್ ರೈಲನ್ನೇರುವ ಉದ್ದೇಶದಿಂದ ಇರ್ಫಾನಾ ಇಬ್ಬರು ಮೊಮ್ಮಕ್ಕಳಾದ ರುಕಿಯಾ ಮತ್ತು ರಾಕಿಯಾ ಜೊತೆ ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಢಿಕ್ಕಿ ಹೊಡೆದಿದೆ.
ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.