Ballari | ಆಟೊ ಸಂಘದ ನಾಮಫಲಕ ಜಖಂ, ಚಾಲಕರಿಗೆ ಜೀವಬೆದರಿಕೆ ಆರೋಪ: 7 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು
ಬಳ್ಳಾರಿ: ನಗರದ ವಿವಿಧ ಆಟೊ ನಿಲ್ದಾಣಗಳಲ್ಲಿದ್ದ ‘ಬಳ್ಳಾರಿ ಜಿಲ್ಲಾ ಆಟೊ ಚಾಲಕರ ಜನಪರ ಸಂಘ’ದ ನಾಮಫಲಕಗಳನ್ನು ಜಖಂಗೊಳಿಸಿ, ಚಾಲಕರಿಗೆ ಜೀವಬೆದರಿಕೆ ಹಾಕಿದ ಆರೋಪದಡಿ ಏಳು ಮಂದಿಯ ವಿರುದ್ಧ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಿಲ್ಲರಪೇಟೆಯ ಹುಂಡೇಕರ್ ರಾಜೇಶ್, ಹುಂಡೇಕರ್ ರಾಕೇಶ್, ಹುಂಡೇಕರ್ ವರುಣ್, ಹುಂಡೇಕರ್ ತನಿಷ್, ಹುಂಡೇಕರ್ ವಂಶಿ, ಗಣೇಶ್ ಹಾಗೂ ಇಷಾಕ್ ಆರೋಪಿಗಳು.
ನ. 15ರಂದು ನಸುಕಿನ ವೇಳೆ ಬೂಡಾ ಕಾಂಪ್ಲೆಕ್ಸ್, ರಂಗಮಂದಿರ ಹಾಗೂ ಮೋತಿ ವೃತ್ತದ ಬಳಿಯ ಆಟೊ ನಿಲ್ದಾಣಗಳಿಗೆ ತೆರಳಿದ ಆರೋಪಿಗಳು, ಸಂಘದ ನಾಮಫಲಕಗಳನ್ನು ಮುರಿದುಹಾಕಿ ಚಾಲಕರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಆಟೊ ಚಾಲಕ ಖಾದರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.