Ballari | ಗಂಗಾಮತ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಆಗ್ರಹ
ಬಳ್ಳಾರಿ/ಕಂಪ್ಲಿ: ಗಂಗಾಮತ ಸಮಾಜವು ಶಿಕ್ಷಣ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾಜದ ಅಭಿವೃದ್ಧಿಗೆ ವಿಶೇಷ ಗಮನಹರಿಸಿ, ಗಂಗಾಮತ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಬೇಕು ಎಂದು ಕಂಪ್ಲಿ ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ಎಲೆಗಾರ ನಾಗರಾಜ ಆಗ್ರಹಿಸಿದರು.
ಪಟ್ಟಣದ ಗಂಗಾಮತ ಸಮಾಜದ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಗಂಗಾದೇವಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಎಸ್‌ಟಿ ಮೀಸಲಾತಿ ನೀಡಿದರೆ ಸಮಾಜದ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದರು.
ಗಂಗಾಮತ ಸಮಾಜದ ಮಕ್ಕಳು ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ತುಂಗಭದ್ರಾ ನದಿ ತಟದಲ್ಲಿರುವ ಗಂಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಸಮುದಾಯ ಭವನದಲ್ಲಿ ಗಂಗಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಕರೇಕಲ್ ಪ್ರಕಾಶ್, ಬಿ.ಸಿದ್ದಪ್ಪ, ಕರೇಕಲ್ ಮನೋಹರ್, ಈರಪ್ಪ, ಬಿ.ಈರಪ್ಪ, ಕೆ.ಬಿ.ವೀರಭದ್ರಪ್ಪ, ಯು.ವಿರುಪಣ್ಣ, ಬಿ.ರಮೇಶ, ನಡವಿ ಮಲ್ಲಿಕಾರ್ಜುನ, ಟಿ.ಮಲ್ಲಿಕಾರ್ಜುನ, ಟಿ.ಗಂಗಣ್ಣ, ಅಯೋದಿ ರಮೇಶ್, ಇಟಗಿ ವಿರುಪಾಕ್ಷಿ, ಡಿ.ರಮೇಶ್, ಸಣ್ಯಪ್ಪ, ವೀರೇಶ್, ಎಸ್.ಸುರೇಶ್, ಸುಣಗಾರ ಮಹೇಶ್, ಇಟಗಿ ಈರಣ್ಣ, ಅಯೋದಿ ವೆಂಕಟೇಶ್, ಆನೆಗುಂದಿ ತಾಯಣ್ಣ, ಜಂಗಾ ವೀರೇಶ್, ಬಸವರಾಜ, ಮಂಜುನಾಥ್, ಜಿ.ಯಲ್ಲಪ್ಪ, ಅರವಿಂದ, ಬೆಂಕೆಪ್ಪ, ಶರಣ, ಪರಶಪ್ಪ, ಮಲ್ಲಯ್ಯ ಸೇರಿದಂತೆ ಸಮಾಜದವರು ಉಪಸ್ಥಿತರಿದ್ದರು.