ಸಂಡೂರು/ಬಳ್ಳಾರಿ: ಸ್ಥಳೀಯ ಯುವಕರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಜೆಎಸ್‌ಡಬ್ಲ್ಯೂ ಫೌಂಡೇಶನ್ ವತಿಯಿಂದ ಭಾರೀ ಮೋಟಾರು ವಾಹನ (ಎಚ್‌ಎಂವಿ) ಚಾಲನಾ ತರಬೇತಿ ಕಾರ್ಯಕ್ರಮವನ್ನು ತಾಲೂಕಿನ ತೋರಣಗಲ್ಲಿನ ಓಪಿಜೆಸಿ ಕೇಂದ್ರದಲ್ಲಿ ಆರಂಭಿಸಲಾಗಿದೆ. ಮೊದಲ ತಂಡದಲ್ಲಿ 30 ಅಭ್ಯರ್ಥಿಗಳು ನೋಂದಾಯಿಸಿಕೊಂಡು ತರಬೇತಿ ಪಡೆಯುತ್ತಿದ್ದು, ಈ ಕಾರ್ಯಕ್ರಮದ ಮೂಲಕ ಸುತ್ತಮುತ್ತಲಿನ ಗ್ರಾಮಗಳ 300 ಯುವಕರಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ.

ಈ ತರಬೇತಿ ಕಾರ್ಯಕ್ರಮದ ವಿಶೇಷತೆಯೆಂದರೆ ಭಾರೀ ವಾಹನ ಚಾಲನಾ ಸಿಮ್ಯುಲೇಟರ್ ಪರಿಚಯಿಸಿರುವುದು. ಇದರ ಮೂಲಕ ಅಭ್ಯರ್ಥಿಗಳು ವಾಹನ ನಿಯಂತ್ರಣ, ಸ್ಟೀರಿಂಗ್ ನಿರ್ವಹಣೆ, ಗೇರ್ ಬದಲಾವಣೆ, ಬ್ರೇಕಿಂಗ್, ಸಂಚಾರ ಪರಿಸ್ಥಿತಿಗಳು ಹಾಗೂ ಅಪಾಯಗಳನ್ನು ಗುರುತಿಸುವ ಕುರಿತು ಸುರಕ್ಷಿತ ಮತ್ತು ನಿಯಂತ್ರಿತ ವಾತಾವರಣದಲ್ಲಿ ಅನುಭವ ಪಡೆಯಲಿದ್ದಾರೆ. ಸಿಮ್ಯುಲೇಟರ್ ತರಬೇತಿಯು ರಸ್ತೆ ಮೇಲಿನ ಪ್ರಾಯೋಗಿಕ ಚಾಲನಾ ತರಬೇತಿಗೆ ಪೂರಕವಾಗಿದ್ದು, ನೈಜ ಸಂಚಾರದಲ್ಲಿ ವಾಹನ ಚಲಾಯಿಸುವ ಮುನ್ನ ಚಾಲನಾ ಕೌಶಲ್ಯ, ವಾಹನ ನಿರ್ವಹಣಾ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ಬೆಳೆಸಲು ಸಹಕಾರಿಯಾಗಲಿದೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಮಾನವ ಸಂಪನ್ಮೂಲ ಮುಖ್ಯಸ್ಥ ಮಯೂರೇಶ್ ಬಾಪಟ್, ಅಭ್ಯರ್ಥಿಗಳ ಸಂವಹನ ಕೌಶಲ್ಯಗಳನ್ನು ಶ್ಲಾಘಿಸಿದರು. ತರಬೇತಿ ಅವಧಿಯಲ್ಲಿ ಯೋಗಾಭ್ಯಾಸಕ್ಕೂ ಆದ್ಯತೆ ನೀಡಿರುವುದನ್ನು ಮೆಚ್ಚಿದರು. ಈ ಕಾರ್ಯಕ್ರಮ ಕೇವಲ ಚಾಲನಾ ತರಬೇತಿಗೆ ಸೀಮಿತವಾಗದೆ, ಕೌಶಲ್ಯ ಭಾರತ ಹಾಗೂ ಎಲ್‌ಎಸ್‌ಸಿ ಪ್ರಮಾಣೀಕರಣದ ಮೂಲಕ ಅಭ್ಯರ್ಥಿಗಳ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ನೆರವಾಗಲಿದೆ ಎಂದರು.

ಎಲ್ಲ ಸಮುದಾಯಗಳ ಜೀವನಮಟ್ಟವನ್ನು ಸುಧಾರಿಸುವುದು ಜೆಎಸ್‌ಡಬ್ಲ್ಯೂ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ. ಈ ತರಬೇತಿಯು ಸ್ಥಳೀಯ ಯುವಕರಿಗೆ ಹೊಸ ಉದ್ಯೋಗಾವಕಾಶಗಳ ಬಾಗಿಲು ತೆರೆಯಲಿದೆ ಎಂದು ಅವರು ತಿಳಿಸಿದರು.

ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ವಲಯ ಮುಖ್ಯಸ್ಥ ಪೆದ್ದಣ್ಣ ಬೀದಲ ಮಾತನಾಡಿ, ಕೈಗಾರಿಕಾ ಅಭಿವೃದ್ಧಿಯೊಂದಿಗೆ ಸುತ್ತಮುತ್ತಲಿನ ಸಮುದಾಯಗಳ ಸಮಗ್ರ ಬೆಳವಣಿಗೆಗೂ ಸಂಸ್ಥೆ ಆದ್ಯತೆ ನೀಡುತ್ತಿದೆ ಎಂದರು. ಯೋಜನಾ ಪ್ರದೇಶದಲ್ಲಿ ಇನ್ನಷ್ಟು ಮಾದರಿ ಗ್ರಾಮಗಳನ್ನು ರೂಪಿಸುವ ಪ್ರಯತ್ನಗಳು ನಡೆಯುತ್ತಿದ್ದು, ಚಾಲನಾ ತರಬೇತಿ ಕಾರ್ಯಕ್ರಮದಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ರಸ್ತೆ ಸುರಕ್ಷತೆಗೆ ವಿಶೇಷ ಆದ್ಯತೆ :

ತರಬೇತಿಯಲ್ಲಿ ನವೀಕೃತ ಸಂಚಾರ ನಿಯಮಗಳು, ರಸ್ತೆ ಚಿಹ್ನೆಗಳು, ರಕ್ಷಣಾತ್ಮಕ ಚಾಲನಾ ತಂತ್ರಗಳು, ವಾಹನ ಸುರಕ್ಷತೆ ಹಾಗೂ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅಪಾಯಗಳನ್ನು ಮುಂಚಿತವಾಗಿ ಗುರುತಿಸುವುದು, ಅಪಘಾತಗಳನ್ನು ತಡೆಗಟ್ಟುವುದು, ಜವಾಬ್ದಾರಿಯುತ ಚಾಲನೆ ಮತ್ತು ರಸ್ತೆ ಸಾರಿಗೆ ನಿಯಮಗಳನ್ನು ಪಾಲಿಸುವುದಕ್ಕೆ ವಿಶೇಷ ಒತ್ತು ನೀಡಲಾಗುತ್ತದೆ. ಸಿಮ್ಯುಲೇಟರ್ ಆಧಾರಿತ ಕಲಿಕೆ, ಪ್ರಾಯೋಗಿಕ ಚಾಲನಾ ಅವಧಿಗಳು ಹಾಗೂ ಪುನರ್‌ತರಬೇತಿಯೂ ಕಾರ್ಯಕ್ರಮದ ಭಾಗವಾಗಿವೆ.

ಇದೇ ಸಂದರ್ಭದಲ್ಲಿ ಬಜಾಜ್ ಮತ್ತು ಮಹೀಂದ್ರಾ ಕಂಪನಿಗಳ ಎರಡು ವಿದ್ಯುತ್ ಪ್ರಯಾಣಿಕ ತ್ರಿಚಕ್ರ ವಾಹನಗಳನ್ನು ಗುತ್ತಿಗೆ ಆಧಾರಿತ ಮಾದರಿಯಲ್ಲಿ ಪರಿಚಯಿಸಲಾಗಿದೆ. ಅಭ್ಯರ್ಥಿಗಳಿಗೆ ವಾಣಿಜ್ಯ ಸಾರಿಗೆ ಕ್ಷೇತ್ರದ ಪ್ರಾಯೋಗಿಕ ಅನುಭವ ಒದಗಿಸುವುದು ಇದರ ಉದ್ದೇಶವಾಗಿದೆ. ಆರು ತರಬೇತಿದಾರರು ನಾಲ್ಕು ಗಂಟೆಗಳ ಅವಧಿಗೆ ಒಂದು ವಿದ್ಯುತ್ ವಾಹನವನ್ನು ಹಂಚಿಕೊಂಡು ಬಳಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಾಹನ ನಿರ್ವಹಣೆ, ಪ್ರಯಾಣಿಕರ ಸಾರಿಗೆ ಹಾಗೂ ಸ್ವಯಂ ಉದ್ಯೋಗದ ಮೂಲಕ ಆದಾಯ ಗಳಿಸುವ ಅವಕಾಶಗಳ ಕುರಿತು ಅನುಭವ ಪಡೆಯಲು ಸಾಧ್ಯವಾಗಲಿದೆ.

ಸ್ವಾವಲಂಬಿ ಬದುಕಿಗೆ ತರಬೇತಿ ನೆರವು :

ತರಬೇತಿಯ ಫಲಾನುಭವಿ ನಾಗೇಶ್ವರಿ ಬಳ್ಳಾರಿ ಮಾತನಾಡಿ, ಚಾಲನಾ ತರಬೇತಿಯ ಜೊತೆಗೆ ಉದ್ಯೋಗಾವಕಾಶಗಳು, ಸಂವಹನ ಕೌಶಲ್ಯ ಮತ್ತು ರಸ್ತೆ ಸುರಕ್ಷತೆಯ ಬಗ್ಗೆಯೂ ಕಲಿಯುತ್ತಿದ್ದೇವೆ. ಪ್ರಮಾಣಪತ್ರದೊಂದಿಗೆ ದೊರೆಯುತ್ತಿರುವ ಈ ಅನುಭವವು ಸ್ವತಂತ್ರವಾಗಿ ಜೀವನ ನಡೆಸಲು ಆತ್ಮವಿಶ್ವಾಸ ನೀಡುತ್ತಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಸಿಒಒ ರಿತೇಶ್ ಸಿನ್ಹಾ, ಜೆಎಸ್‌ಡಬ್ಲ್ಯೂನ ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್, ಫೌಂಡೇಶನ್‌ನ ಕೌಶಲ್ಯ ವಲಯ ಮುಖ್ಯಸ್ಥ ಮಹೇಶ್ ಶೆಟ್ಟಿ, ವಿಜಯನಗರದ ಸ್ಥಳೀಯ ಮುಖ್ಯಸ್ಥೆ ಭಾರತಿ ಪಳನಿಸ್ವಾಮಿ, ಕೌಶಲ್ಯ ಮತ್ತು ಜೀವನೋಪಾಯ ವಿಭಾಗದ ಮುಖ್ಯಸ್ಥೆ ಶ್ರೇಷ್ಠಾ ಭಟ್ಟಾಚಾರ್ಜಿ, ಕೌಶಲ್ಯ ಪ್ರತಿಷ್ಠಾನದ ಗೋಪಾಲ್ ಮಣಿ ಡಿ.ಬಿ. ಸೇರಿದಂತೆ ಸುಮಾರು 70 ಮಂದಿ ಭಾಗವಹಿಸಿದ್ದರು.

ಕೌಶಲ್ಯಪೂರ್ಣ, ಸುರಕ್ಷತಾ ಪ್ರಜ್ಞೆಯುಳ್ಳ ಹಾಗೂ ಉದ್ಯಮದ ಅಗತ್ಯಗಳಿಗೆ ಸಿದ್ಧರಾಗಿರುವ ಭಾರೀ ವಾಹನ ಚಾಲಕರನ್ನು ರೂಪಿಸುವುದರ ಜೊತೆಗೆ, ವಾಣಿಜ್ಯ ಸಾರಿಗೆ ಕ್ಷೇತ್ರದಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಜೆಎಸ್‌ಡಬ್ಲ್ಯೂ ಫೌಂಡೇಶನ್ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor