Ballari | ಲಾರಿ–ಬೈಕ್ ಢಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು
ಸಾಂದರ್ಭಿಕ ಚಿತ್ರ
ಸಂಡೂರು/ಬಳ್ಳಾರಿ: ತಾಲೂಕಿನ ನಿಡುಗುರ್ತಿ ಗ್ರಾಮದ ಕುರುಬರಸ್ವಾಮಿ ಅವರ ಹೊಲದ ಸಮೀಪ ರವಿವಾರ ಸಂಜೆ ಸಂಭವಿಸಿದ ಲಾರಿ ಮತ್ತು ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಪೋತಲಕಟ್ಟೆ ಗ್ರಾಮದ ಸಿದ್ದಪ್ಪ (35) ಹಾಗೂ ದಾವಣಗೆರೆ ಜಿಲ್ಲೆಯ ಐಗೂರು ಗ್ರಾಮದ ನಾಗರಾಜ (34) ಎಂದು ಗುರುತಿಸಲಾಗಿದೆ.
ಪೊಲೀಸ್ ದಾಖಲೆಯ ಪ್ರಕಾರ, ಸೆ.20ರಂದು ಸಂಜೆ ಸುಮಾರು 6.45ರ ವೇಳೆಗೆ ಸಿದ್ದಪ್ಪ ಅವರು ಬೈಕ್‌ನಲ್ಲಿ ನಾಗರಾಜ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಬಂಡ್ರಿ ಗ್ರಾಮದಿಂದ ಪೋತಲಕಟ್ಟೆ ಗ್ರಾಮದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಕಾಟಿನಕಂಬ ಗ್ರಾಮದ ಸಮೀಪ ಎದುರಿನಿಂದ ಬಂದ ಲಾರಿ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ಪರಿಣಾಮ ಸಿದ್ದಪ್ಪ ಹಾಗೂ ನಾಗರಾಜ ಅವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಚಾಲಕ ಕರಿಬಸವ ಅವರು ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗುನ್ನೆ ಸಂಖ್ಯೆ 93/2026 ದಾಖಲಿಸಿಕೊಂಡಿರುವ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281 ಹಾಗೂ 106(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.