Ballari | ಅಲ್ಪಸಂಖ್ಯಾತರ ವಾರ್ಡ್‌ಗಳ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ: ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ನಗರದ ವಿವಿಧ ವಾರ್ಡ್‌ಗಳ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು.
ನಗರದ ರೂಪನಗುಡಿ ರಸ್ತೆಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ಅಲ್ಪಸಂಖ್ಯಾತ ಸಮುದಾಯದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಹಾಗೂ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಮುಸ್ಲಿಂ ಶಾದಿ ಮಹಲ್ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಇದರಿಂದ ಬಡ ಕುಟುಂಬಗಳ ಶುಭ ಸಮಾರಂಭಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಮುದಾಯದ 7ರಿಂದ 8 ಮಂದಿಗೆ ಪಕ್ಷದ ಟಿಕೆಟ್ ಕೊಡಿಸಲು ಪ್ರಯತ್ನಿಸಲಾಗುವುದು. ಸಮಾಜಸೇವೆಯ ಆಸಕ್ತಿ ಹೊಂದಿರುವ ಯುವಕ-ಯುವತಿಯರು ರಾಜಕೀಯ ಪ್ರಾತಿನಿಧ್ಯ ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಮತದಾರರ ಹಕ್ಕುಗಳ ರಕ್ಷಣೆ ನನ್ನ ಆದ್ಯ ಕರ್ತವ್ಯವಾಗಿದೆ. ಮತದಾರರ ಪಟ್ಟಿಯಿಂದ ಮುಸ್ಲಿಂ ಸಮುದಾಯದವರ ಹೆಸರುಗಳನ್ನು ಅಕ್ರಮವಾಗಿ ಕೈಬಿಡುವ ಪ್ರಯತ್ನಗಳನ್ನು ತಡೆಯಲು ಶ್ರಮಿಸಿದ್ದೇನೆ. ಇದು ರಾಜಕೀಯ ಲಾಭಕ್ಕಾಗಿ ನಡೆಸಿದ ಹೋರಾಟವಲ್ಲ, ಪ್ರಜಾಪ್ರಭುತ್ವದ ಹಕ್ಕುಗಳನ್ನು ಉಳಿಸುವ ಉದ್ದೇಶದ ಹೋರಾಟವಾಗಿದೆ ಎಂದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡದಂತೆ ಶ್ರಮಿಸಿದ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಸಮುದಾಯದ ಮುಖಂಡರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನೂ ಸಲ್ಲಿಸಲಾಯಿತು.
ಮಾಜಿ ಡಿಸಿಸಿ ಅಧ್ಯಕ್ಷ ಜಿ.ಎಸ್.ಮುಹಮ್ಮದ್ ರಫೀಕ್ ಮಾತನಾಡಿ, ಮತದಾನ ಮಾಡಿದ ಬಳಿಕ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಾಗೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳುವ ಎಚ್ಚರವನ್ನು ಸಮುದಾಯ ಹೊಂದಿರಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಮುಖಂಡ ಕಣೇಕಲ್ ಸಾಹೇಬ್, ಪಾಲಿಕೆ ಸದಸ್ಯರಾದ ನೂರ್ ಮುಹಮ್ಮದ್, ಜಬ್ಬಾರ್, ನಾಜು, ಮಿಂಚು ಸೀನಾ ಹಾಗೂ ಮುಖಂಡರಾದ ಪೀರಾ ಸಾಹೇಬ್, ಅಯಾಜ್ ಅಹ್ಮದ್, ಹಾಜಿ ಇಲಿಯಾಸ್, ಅರ್ಷದ್, ಹುಸೇನ್ ಪೀರಾ ಉಪಸ್ಥಿತರಿದ್ದರು.