ಬಳ್ಳಾರಿ | ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಮನವಿ
ಬಳ್ಳಾರಿ / ಕಂಪ್ಲಿ :ತಾಲ್ಲೂಕಿನ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಎನ್‌ಎಮ್‌ಡಿಸಿ ಸಂಸ್ಥೆಯ CSR ನಿಧಿಯಿಂದ ಅನುದಾನ ಬಿಡುಗಡೆ ಮಾಡಲು ಶಿಫಾರಸ್ಸು ಮಾಡುವಂತೆ ಕಂಪ್ಲಿಯ ಜೆಡಿಎಸ್ ಮುಖಂಡ ಶಬ್ಬೀರ್ ಉಳೇನೂರು ಅವರು ಬೆಂಗಳೂರು ನಗರದಲ್ಲಿ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ಶಬ್ಬೀರ್ ಉಳೇನೂರು ಅವರು, ಸಂಡೂರು ತಾಲ್ಲೂಕಿನ ದೋಣಿಮಲೆ ಎನ್‌ಎಮ್‌ಡಿಸಿ ಸಂಸ್ಥೆಯ CSR (ಸಾಮಾಜಿಕ ಹೊಣೆಗಾರಿಕೆ) ನಿಧಿಯಿಂದ ಕಂಪ್ಲಿ, ಹೊಸಪೇಟೆ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿ ತಾಲ್ಲೂಕಿಗೆ ₹5 ಕೋಟಿಗಳು ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡುವಂತೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾಗಿ ಹೇಳಿದರು.
ಮನವಿಗೆ ಪ್ರತಿಕ್ರಿಯಿಸಿದ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಈ ಕುರಿತು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಮುಹಮ್ಮದ್ ಜಾಕೀರ್, ವಿನೋದ್, ಆಮ್ಜದ್ ಸೇರಿದಂತೆ ಹಲವರು ಹಾಜರಿದ್ದರು.