ಸಂಡೂರು: ವಿವಿಧ ವಿವಾದಗಳ ನಡುವೆಯೇ ಇಲ್ಲಿನ ವಿದ್ಯಾನಗರ ಟೌನ್‌ಶಿಪ್‌ನ ಕಲಾಧಾಮದಲ್ಲಿ ಶನಿವಾರ ಜೆಎಸ್‌ಡಬ್ಲ್ಯು ಸಾಹಿತ್ಯ ಹಬ್ಬದ ಪ್ರಥಮ ಆವೃತ್ತಿಗೆ ಗಣ್ಯರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಂಸದ ಇ.ತುಕಾರಾಂ, ಕನ್ನಡ ನಾಡಿಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ವಿಶ್ವವಿಖ್ಯಾತ ಹಂಪಿಯಂತಹ ಐತಿಹಾಸಿಕ ತಾಣ, ಕಲೆ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೊಂದಿರುವ ಈ ಭಾಗದಲ್ಲಿ ಸಾಹಿತ್ಯ ಹಬ್ಬ ಆಯೋಜಿಸಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿ, ಸಾಹಿತ್ಯ ಉತ್ಸವ ಎನ್ನುವ ಬದಲಿಗೆ ಸಾಹಿತ್ಯ ಹಬ್ಬ ಎಂದು ಹೆಸರಿಸಿರುವುದು ಸೂಕ್ತವಾಗಿದೆ. ಮುಂದಿನ ವರ್ಷದಿಂದ ಜೆಎಸ್‌ಡಬ್ಲ್ಯು ವತಿಯಿಂದ ಸಾಹಿತ್ಯ ಪ್ರಶಸ್ತಿ ನೀಡುವಂತಾಗಬೇಕು. ಇಂತಹ ಕಾರ್ಯಕ್ರಮಗಳು ಪ್ರಾದೇಶಿಕವಾಗಿ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ಲೇಖಕಿ ವಸುಂಧರಾ ಭೂಪತಿ ಮಾತನಾಡಿ, ಕಲ್ಯಾಣ ಕರ್ನಾಟಕದ ಸಾಹಿತಿಗಳು ಹಾಗೂ ಕಲಾವಿದರು ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬರೂ ಪುಸ್ತಕಗಳನ್ನು ಸಂಗಾತಿಯಾಗಿಸಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ವಿರೂಪಾಕ್ಷಿ ಪೂಜಾರಹಳ್ಳಿ, ಜೆಎಸ್‌ಡಬ್ಲ್ಯು ಸ್ಟೀಲ್ ವಿಜಯನಗರ ವರ್ಕ್ಸ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಎಲ್.ಆರ್. ಸಿಂಗ್, ಸಾಹಿತಿಗಳಾದ ಅಮರೇಶ ನುಗಡೋಣಿ ಹಾಗೂ ವಸುಧೇಂದ್ರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪೀರಾಸಾಬ್/ವಾರ್ತಾಭಾರತಿ

contributor

ಬೂದುಗುಪ್ಪ ಪೀರಾಸಾಬ್ ಅವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವೆಬ್ ಪತ್ರಿಕೋದ್ಯಮದ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳ ವರದಿಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿಯಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ