×
Ad

Sandur | ಬಗರ್ ಹುಕುಂ ರೈತರಿಗೆ ತಕ್ಷಣ ಪಟ್ಟಾ ವಿತರಿಸಲು ಆಗ್ರಹ

Update: 2026-05-11 17:48 IST

ಸಂಡೂರು: ತಾಲೂಕಿನ ಬಗರ್ ಹುಕುಂ ಅಡಿಯಲ್ಲಿ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ತಕ್ಷಣ ಪಟ್ಟಾ ವಿತರಿಸಬೇಕು ಎಂದು ಆಗ್ರಹಿಸಿ ರೈತರ ಹೋರಾಟ ಸಮಿತಿ ವತಿಯಿಂದ ಸಂಡೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ರೈತರ ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ವಿ.ಎಸ್.ಶಂಕರ್ ಮಾತನಾಡಿ, ತಾಲೂಕಿನ ಅನೇಕ ರೈತರು ಹಲವು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೂ, ಬಗರ್ ಹುಕುಂ ಸಮಿತಿಯಿಂದ ಇದುವರೆಗೆ ಯಾವುದೇ ರೈತರಿಗೆ ಪಟ್ಟಾ ವಿತರಣೆ ಮಾಡಲಾಗಿಲ್ಲ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಆರ್.ಡಿ. 45 ಎಲ್‌ಜಿಪಿ 2023ರ, ಡಿಸೆಂಬರ್ 1, 2023ರ ಸುತ್ತೋಲೆ ಪ್ರಕಾರ ನಮೂನೆ-50, 53 ಹಾಗೂ 57ರ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ ಅರ್ಹ ರೈತರಿಗೆ ಪಟ್ಟಾ ನೀಡುವಂತೆ ಸೂಚನೆ ಇದ್ದರೂ, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಒಂದು ತಿಂಗಳೊಳಗಾಗಿ ಪಟ್ಟಾ ವಿತರಿಸಬೇಕು. ಈಗಾಗಲೇ ಸಲ್ಲಿಸಿರುವ ನಮೂನೆ-50 ಮತ್ತು 53ರ ಅರ್ಜಿಗಳಿಗೆ ಅನುಗುಣವಾಗಿ ಪಹಣಿಗಳಲ್ಲಿ ರೈತರ ಹೆಸರನ್ನು ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸರ್ಕಾರದ ನಿಯಮಾನುಸಾರ ರೈತರಿಗೆ ನ್ಯಾಯ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ರೈತರ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಬಗರ್ ಹುಕುಂ ಅರ್ಜಿಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸರ್ಕಾರದ ನಿಯಮಾವಳಿಗಳ ಅನುಸಾರ ಅರ್ಹ ರೈತರಿಗೆ ನ್ಯಾಯ ದೊರಕುವಂತೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಲಾಗುವುದು.

-ಅನಿಲ್ ಕುಮಾರ್, ತಹಶೀಲ್ದಾರರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News