Bengaluru | ಜೀವಂತ ಗುಂಡುಗಳಿದ್ದ ಪಿಸ್ತೂಲ್ ಮ್ಯಾಗಝಿನ್ ಹೋಟೆಲ್‍ನಲ್ಲಿ ಪತ್ತೆ: ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಜೀವಂತ ಗುಂಡುಗಳಿದ್ದ ಪಿಸ್ತೂಲ್ ಮ್ಯಾಗಝಿನ್ ಅನ್ನು ನಗರದ ಹೋಟೆಲ್‍ವೊಂದರ ರೂಮ್‍ನಲ್ಲಿಯೇ ಬಿಟ್ಟು ತೆರಳಿದ್ದ ಆರೋಪಿಯನ್ನು ಇಲ್ಲಿನ ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರ್ಮಾನ್ ಮುತಾಹರ್(34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಯುವತಿಯೊಂದಿಗೆ ಬಂದು ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್‍ನಲ್ಲಿ ರೂಮ್ ಪಡೆದಿದ್ದ ಆರೋಪಿ, ಹಿಂತಿರುಗಿ ಹೋಗುವಾಗ 7 ಗುಂಡುಗಳಿದ್ದ ಪಿಸ್ತೂಲ್ ಮ್ಯಾಗಝಿನ್ ಅನ್ನು ರೂಮ್‍ನಲ್ಲಿಯೇ ಬಿಟ್ಟು ಹೋಗಿದ್ದ. ವಾಪಸ್ ತೆಗೆದುಕೊಂಡು ಹೋಗಲು ಬರುತ್ತಿರುವುದಾಗಿ ಹೇಳಿದ್ದ ಆರೋಪಿ, ಪದೇ ಪದೆ ಬರುವಂತೆ ಹೇಳಿದರೂ ಸರಿಯಾಗಿ ಸ್ಪಂದಿಸದಿದ್ದಾಗ ಹೋಟೆಲ್ ಮ್ಯಾನೇಜರ್ ಪೊಲೀಸ್ ಠಾಣೆಗೆ ಮ್ಯಾಗಝಿನ್ ಒಪ್ಪಿಸಿ ದೂರು ನೀಡಿದ್ದರು.
ಜೆ.ಸಿ.ನಗರ ವ್ಯಾಪ್ತಿಯ ನಂದಿದುರ್ಗ ರಸ್ತೆಯಲ್ಲಿನ ಜಯಮಹಲ್ ಪ್ಯಾಲೇಸ್ ಹೋಟೆಲ್‍ಗೆ ಎ.27ರಂದು ರಾತ್ರಿ ಯುವತಿಯೊಬ್ಬಳೊಂದಿಗೆ ಬಂದಿದ್ದ ಅರ್ಮಾನ್ ಮುತಾಹರ್, ‘ನಾನು ಯುಎಸ್‍ಎಯ ಗ್ರೀನ್ ಕಾರ್ಡ್ ಹೋಲ್ಡರ್’ ಎಂದು ಹೇಳಿ, ಪಾಸ್‍ಪೋರ್ಟ್ ದಾಖಲೆ ನೀಡಿ ರೂಮ್‍ವೊಂದನ್ನು ಬುಕ್ ಮಾಡಿದ್ದ. ಎಪ್ರಿಲ್ 28ರ ಬೆಳಗ್ಗೆ ಇಬ್ಬರೂ ರೂಮ್‍ನಿಂದ ಚೆಕ್-ಔಟ್ ಆಗಿದ್ದರು. ಸ್ವಲ್ಪ ಸಮಯದ ಬಳಿಕ ಹೋಟೆಲ್‍ನ ರಿಸೆಪ್ಷನ್‍ಗೆ ತಾನೇ ಕರೆ ಮಾಡಿದ್ದ ಆರೋಪಿ ‘ಜೀವಂತ ಗುಂಡುಗಳಿರುವ ನನ್ನ ಪಿಸ್ತೂಲ್ ಮ್ಯಾಗಝಿನ್ ಅನ್ನು ರೂಮ್‍ನಲ್ಲಿ ಮರೆತು ಬಂದಿದ್ದೇನೆ. ನಾನು ಅದನ್ನು ಪಡೆಯಲು ಬರುತ್ತೇನೆ, ಎತ್ತಿಡಿ’ ಎಂದಿದ್ದ.
ತಕ್ಷಣ ಆತ ತಂಗಿದ್ದ ರೂಮ್ ಪರಿಶೀಲಿಸಿದಾಗ ಜೀವಂತ ಗುಂಡುಗಳಿದ್ದ ಮ್ಯಾಗಝಿನ್ ಪತ್ತೆಯಾಗಿತ್ತು. ಕೂಡಲೇ ಬಂದು ಕೊಂಡೊಯ್ಯುವಂತೆ ಹೋಟೆಲ್ ಸಿಬ್ಬಂದಿ ತಿಳಿಸಿದ್ದರು. ಆದರೆ, ಮಳೆಯಲ್ಲಿ ಸಿಲುಕಿಕೊಂಡಿರುವುದಾಗಿ ಕಾರಣ ನೀಡಿದ್ದ ಆರೋಪಿ, ನಂತರ ಬರುವುದಾಗಿ ತಿಳಿಸಿದ್ದ. ಅದಾದ ಬಳಿಕ ಹಲವು ಬಾರಿ ಕರೆ ಮಾಡಿದಾಗಲೂ ಬರುವುದಾಗಿ ಹೇಳುತ್ತಿದ್ದ ಆರೋಪಿ ವಾಪಸ್ ಬಂದಿರಲಿಲ್ಲ. ಮೇ 4ರಂದು ಕರೆ ಮಾಡಿ, ‘ನಿಮ್ಮ ಮ್ಯಾಗಝಿನ್ ಅನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲ. ಪೊಲೀಸರಿಗೆ ಒಪ್ಪಿಸುತ್ತಿದ್ದೇವೆ, ಅವರಿಂದ ಪಡೆದುಕೊಳ್ಳಿ’ ಎಂದಾಗಲು ಆರೋಪಿ ‘ಸರಿ, ನಾನು ಪೊಲೀಸ್ ಠಾಣೆಯಿಂದಲೇ ಪಡೆದುಕೊಳ್ಳುತ್ತೇನೆ’ ಎಂದು ಉತ್ತರಿಸಿದ್ದ ಎಂದು ಹೋಟೆಲ್ ಮೂಲಗಳು ತಿಳಿಸಿವೆ.
ಇದಾದ ಬಳಿಕ ಹೋಟೆಲ್ ಮ್ಯಾನೇಜರ್ ಜೆ.ಸಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿ ಮ್ಯಾಗಜೀನ್ ಹಸ್ತಾಂತರಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದು ಯುಎಸ್‍ಎ ನಿರ್ಮಿತ ಗುಂಡುಗಳು ಎಂಬುದು ಪತ್ತೆಯಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯನ್ನು ಉಲ್ಲಂಘಿಸಿ ಮ್ಯಾಗಝಿನ್ ಅನ್ನು ದೇಶದೊಳಗೆ ಹಾಗೂ ಹೋಟೆಲ್‍ಗೆ ಹೇಗೆ ತಂದಿದ್ದ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.