×
Ad

ಬೆಂಗಳೂರು | ಮಹಿಳೆ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ವರದಿ ನೀಡುವಂತೆ ಕಮಿಷನರ್‌ಗೆ ಗೃಹ ಸಚಿವ ಜಿ.ಪರಮೇಶ್ವರ್‌ ಸೂಚನೆ

Update: 2025-11-04 14:07 IST

ಬೆಂಗಳೂರು : ಮನೆ ಕೆಲಸದ ಮಹಿಳೆಯನ್ನು ಅಕ್ರಮ ಬಂಧನದಲ್ಲಿಟ್ಟು ವರ್ತೂರು ಠಾಣೆ ಪೊಲೀಸರು ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯು ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸ್ ಆಯುಕ್ತರಿಂದ ವರದಿ ಕೇಳಿದ್ದೇನೆ. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಏನೇ ಆದರೂ ಹೈಕಮಾಂಡ್ ತೀರ್ಮಾನ ಎಂಬುದನ್ನು ನಾನು ಹೇಳಿದ್ದೇನೆ. ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕಮಾಂಡ್ ತೀರ್ಮಾನವನ್ನು ಗೌರವಿಸುತ್ತೇವೆ. ಈ ಬಗ್ಗೆ ಪದೇಪದೆ ಹೇಳುತ್ತಿದ್ದರೂ, ನೀವು ಅದನ್ನು ಕೆದಕುತ್ತೀರಿ. ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನಲ್ಲಿ ಶಿಸ್ತು ಇದೆ. ಅಲ್ಲಿ ಏನು ತೀರ್ಮಾನ ಆಗುತ್ತದೆ, ಅದನ್ನು ಪಾಲಿಸಿಕೊಂಡು ಹೋಗುತ್ತೇವೆ. ಯಾರು ಪಾಲಿಸುವುದಿಲ್ಲ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೆ. ಇದು ಮೊದಲಿನಿಂದಲೂ‌ ನಡೆದುಕೊಂಡು ಬಂದಿರುವ ಪದ್ಧತಿ ಎಂದರು.

ಹೈಕಮಾಂಡ್ ಏನು ಹೇಳುತ್ತಾರೆ, ಅದನ್ನು ನಾನು ಪಾಲಿಸುತ್ತೇನೆ ಎಂಬ ಸಿಎಂ ಅವರ ಹೇಳಿಕೆ ಸರಿ ಇದೆ. ಈ ಮಾತನ್ನು ಅವರು ಮೊದಲಿನಿಂದಲೂ ಹೇಳಿದ್ದಾರೆ. ಈಗಲೂ ಅದೇ ಮಾತನ್ನು ಹೇಳಿದ್ದಾರೆ‌ ಎಂದು ಸಮರ್ಥಿಸಿದರು.

ಮುಖ್ಯಮಂತ್ರಿಯವರು ತುಮಕೂರಿಗೆ ಬಂದಾಗ ಎರಡು-ಮೂರು ಬಾರಿ ಕೆ.ಎನ್.ರಾಜಣ್ಣ ಅವರ ಮನೆಗೆ ಊಟಕ್ಕೆ ಹೋಗಿದ್ದಾರೆ. ಈಗಲೂ ನಾವೆಲ್ಲ ಹೋಗುತ್ತೇವೆ. ದೆಹಲಿಗೆ ಯಾರು ಹೋಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ನಾನು ದೆಹಲಿಗೆ ಹೋಗುವ ಬಗ್ಗೆ ಯೋಚನೆ ಮಾಡಿಲ್ಲ. ಅವಶ್ಯಕತೆ ಬಿದ್ದರೆ ಹೋಗುತ್ತೇನೆ ಎಂದು ಹೇಳಿದರು.

ಹಿರಿಯ ಸಚಿವರಿಗೆ‌ ಕ್ಯಾಬಿನೆಟ್‌ನಿಂದ ಕೋಕ್ ನೀಡುವುದರಿಂದ ವರ್ಗಾವಣೆ ನಿಂತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಗತ್ಯತೆ ನೋಡಿಕೊಂಡು ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡುತ್ತಾರೆ. ಪೊಲೀಸ್ ಇಲಾಖೆ ಹೊರತುಪಡಿಸಿ, ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ನಿಂತಿದೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗೆ ಯಾವುದೇ ಟೈಂ ಫ್ರೇಮ್ ಇಲ್ಲ. ಅಗತ್ಯತೆ ಮೇರೆಗೆ ನಿರಂತರವಾಗಿ ವರ್ಗಾವಣೆ ನಡೆಯುತ್ತಿರುತ್ತದೆ ಎಂದು ಹೇಳಿದರು.

ಹಿರಿಯ ಸಚಿವರನ್ನು ಕ್ಯಾಬಿನೆಟ್‌ನಿಂದ ಕೈಬಿಡುವ ವಿಚಾರವನ್ನು ನಾವು ಹೇಳಲು ಆಗುವುದಿಲ್ಲ. ಇದು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದರು.

ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಕ್ಕರೆ ಖಾತೆ ಸಚಿವರಾದ ಶಿವಾನಂದ ಪಾಟೀಲ್ ಅವರ ಜೊತೆ ಮಾತನಾಡಿದ್ದೇನೆ. ಆದಷ್ಟು ಬೇಗ ಕಬ್ಬು ಬೆಲೆ ನಿಯಂತ್ರಣ ಮತ್ತು ಬೆಲೆ ತೀರ್ಮಾನ ಮಾಡಿ, ಬಗೆಹರಿಸುವ ಬಗ್ಗೆ ಮಾತನಾಡಿದ್ದೇನೆ. ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಆ ಭಾಗದ ಸಚಿವರು ಸಭೆ ಕರೆದು ಬಗೆಹರಿಸುವುದಾಗಿ ತಿಳಿಸಿದ್ದಾರೆ.

ನಿನ್ನೆ ಪ್ರತಿಭಟನೆ ವೇಳೆ ರೈತರೊಬ್ಬರು ವಿಷ ಕುಡಿದು, ಆತ್ಮಹತ್ಯೆಗೆ ಯತ್ನಿಸಿದ್ದರು. ನಮ್ಮ‌ ಪೊಲೀಸರು ರಕ್ಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News