ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಇಕ್ಬಾಲ್ ಆರೋಗ್ಯ ವಿಚಾರಿಸಿದ ಸಿಎಂ ಡಿ.ಕೆ.ಶಿವಕುಮಾರ್
Photo: X/@DKShivakumar
ಬೆಂಗಳೂರು: ಎದೆನೋವು ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯತ್ತಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ರವಿವಾರ ಎಂದಿನಂತೆ ಕ್ಷೇತ್ರದಲ್ಲಿ ಇಕ್ಬಾಲ್ ಹುಸೇನ್ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಸಂಜೆ ವೇಳೆಗೆ ಮನೆಗೆ ಮರಳಿದ್ದರು. ತಡರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ಕುಟುಂಬದ ಸದಸ್ಯರು, ಆಪ್ತ ಸಹಾಯಕರು ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರೊಂದಿಗೆ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಇಕ್ಬಾಲ್ ಹುಸೇನ್ ಆರೋಗ್ಯ ವಿಚಾರಿಸಿದರು.
ಈ ಕುರಿತು ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇಕ್ಬಾಲ್ ಹುಸೇನ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಈಗ ಆರೋಗ್ಯವಾಗಿದ್ದಾರೆ. ಗಾಬರಿಯಾಗುವ ಅವಶ್ಯಕತೆ ಇಲ್ಲ. ಈಗ ಚೇತರಿಸಿಕೊಂಡಿದ್ದಾರೆ, ವೈದ್ಯರಿಗೆಲ್ಲ ಮಾತನಾಡಿದ್ದೇನೆ ಎಂದರು.
ಆನಂತರ ಆಸ್ಪತ್ರೆಯ ವೈದ್ಯ ಡಾ.ವಿಕೆ ಶ್ರೀನಿವಾಸ್ ಮಾತನಾಡಿ, ಶನಿವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾದರು. ಮಧುಮೇಹ ಕೂಡಾ ಇದೆ. ತಕ್ಷಣವೇ ಆಂಜಿಯೋಗ್ರಾಮ್ ಮಾಡಿಸಿದಾಗ ಹೃದಯದಲ್ಲಿ 3 ಬ್ಲಾಕ್ ಇರುವುದು ಕಂಡುಬಂದಿದೆ. ಹಾಗಾಗಿ ಶಸ್ತ್ರ ಚಿಕಿತ್ಸೆ ಇನ್ನೆರಡು ಮೂರು ದಿನದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.