×
Ad

ದೇಶದಲ್ಲಿಯೇ ಮೊದಲ ಬಾರಿಗೆ ಕಾಂಗ್ರೆಸ್ ಸರಕಾರ ‘ಗಿಗ್ ಕಾರ್ಮಿಕರ’ ಕೈ ಹಿಡಿದಿದೆ: ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್

Update: 2026-05-25 00:22 IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರವು ದೇಶದಲ್ಲಿ ಮೊದಲ ಬಾರಿಗೆ ಗಿಗ್ ಕಾರ್ಮಿಕರಿಗೆ ಮೀಸಲಾದ ಕಾನೂನು ಚೌಕಟ್ಟನ್ನು ಪರಿಚಯಿಸುವ ಮೂಲಕ ಅವರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಹೇಳಿದ್ದಾರೆ.

ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಗಿಗ್ ಕಾರ್ಮಿಕರಿಗೆ ಕಲ್ಯಾಣ ಕಾಯ್ದೆ ಜಾರಿಗೆ ತಂದಿದ್ದು, ವೇಗವಾಗಿ ಬೆಳೆಯುತ್ತಿರುವ ಪ್ಲಾಟ್‍ಫಾರ್ಮ್ ಆರ್ಥಿಕತೆಯಲ್ಲಿ ಕಾರ್ಮಿಕ ಹಕ್ಕುಗಳ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ ಎಂದರು.

ಸಾಮಾನ್ಯ ಕಾರ್ಮಿಕ ಕಾನೂನುಗಳಿಂದ ಹೊರಗಿರುವ ಲಕ್ಷಾಂತರ ಗಿಗ್ ಕಾರ್ಮಿಕರು, ಬೈಕ್, ಟ್ಯಾಕ್ಸಿ ಸವಾರರು ಮತ್ತು ಅಪ್ಲಿಕೇಶನ್ ಆಧಾರಿತ ಕಾರ್ಮಿಕರಿಗೆ ಈ ಹೊಸ ಕಾಯ್ದೆಯಿಂದ ಮನ್ನಣೆ ಮತ್ತು ಕಾನೂನು ರಕ್ಷಣೆ ದೊರೆಯಲಿದೆ. ಕಾರ್ಮಿಕ ಇಲಾಖೆ ವ್ಯಾಪ್ತಿಯ ಕಲ್ಯಾಣ ಮಂಡಳಿಯು ಕಾರ್ಮಿಕರಿಗೆ ಹಿಂದೆಂದೂ ಇಲ್ಲದ ಕಾನೂನು ಮಾನ್ಯತೆ ಮತ್ತು ರಕ್ಷಣೆಯನ್ನು ನೀಡಲಿದೆ. ಜತೆಗೆ ಗಿಗ್ ಕಾರ್ಮಿಕರಿಗೆ ಇಎಸ್‍ಐ, ಪಿಎಫ್ ಅಥವಾ ಅಪಘಾತ ವಿಮೆಯಂತಹ ಪ್ರಯೋಜನ ಸಹ ಸಿಗಲಿದೆ ಎಂದು ಅವರು ಉಲ್ಲೇಖಿಸಿದರು.

ಕಾಯ್ದೆ ಮೂಲಕ ಕಾರ್ಮಿಕರು ಕುಂದುಕೊರತೆಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಬಹುದಾಗಿದೆ. ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ(ಐಪಿಜಿಆರ್‍ಎಸ್) ಪೋರ್ಟಲ್ ಮೂಲಕ ಕಾರ್ಮಿಕರು ದೂರುಗಳನ್ನು ಸಲ್ಲಿಸಬಹುದು. ಒಟ್ಟಿನಲ್ಲಿ ಗಿಗ್ ಕಾರ್ಮಿಕರು ತಮ್ಮ ವೇತನ, ರಜೆ, ದುಡಿಯುವ ಸ್ಥಿತಿಗತಿ ಸೇರಿ ಏನೇ ಸಮಸ್ಯೆಗಳಿದ್ದರೂ ದೂರು ನೀಡಿದರೆ ಅವುಗಳನ್ನು ಸಂಬಂಧಿಸಿದ ಕಂಪೆನಿಗೆ ವರ್ಗಾವಣೆ ಮಾಡಿ ಪರಿಹಾರ ಒದಗಿಸಿಕೊಡಲಾಗುತ್ತದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ದೀವ್ಯಾ ಸೇರಿದಂತೆ ಪ್ರಮುಖರಿದ್ದರು.

ಗಿಗ್ ನೌಕರರ ಸಮಾವೇಶ: ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾಋವು ಗಿಗ್ ನೌಕರರ ರಕ್ಷಣೆಗೆ ಹಲವು ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗಿಗ್ ನೌಕರರ ಸಮಾವೇಶ ನಡೆಸುವ ಚಿಂತನೆ ನಡೆಸಲಾಗಿದೆ’ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News