×
Ad

ಸುಪ್ರೀಂ ಕೋರ್ಟ್ ಆದೇಶ ಬರುವರೆಗೂ ರಾಜ್ಯದಲ್ಲಿ ಎಸ್‍ಐಆರ್ ಜಾರಿಗೊಳಿಸಬಾರದು: ‘ನನ್ನ ಮತ ನನ್ನ ಹಕ್ಕು’ ಸಂಘಟನೆ

Update: 2026-05-23 23:57 IST

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಕುರಿತು ಸುಪ್ರೀಂ ಕೋರ್ಟ್ ಆದೇಶ ಬರುವ ತನಕ ಮತ್ತು ಎಸ್‍ಐಆರ್ ಹಂತ 1-2ರ ಸ್ವತಂತ್ರ ಪರಿಶೀಲನೆ ನಡೆಯುವವರೆಗೂ ಕರ್ನಾಟಕದಲ್ಲಿ ಎಸ್‍ಐಆರ್ ಜಾರಿಗೊಳಿಸಬಾರದು. ಬದಲಿಗೆ ಸಂವಿಧಾನ ಮತ್ತು ಕಾನೂನುಬದ್ಧ ನಿಯಮಾವಳಿಗಳಿಗೆ ಅನುಗುಣವಾದ ಪಾರದರ್ಶಕ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು ಎಂದು ‘ನನ್ನ ಮತ ನನ್ನ ಹಕ್ಕು ಸಂಘಟನೆ’ ಒತ್ತಾಯಿಸಿದೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ‘ನನ್ನ ಮತ, ನನ್ನ ಹಕ್ಕು’ ಸಂಘಟನೆ ವತಿಯಿಂದ ರಾಜ್ಯಮಟ್ಟದ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಬಿ.ಆರ್.ಪಾಟೀಲ್, ಲಿಂಗತ್ವ ಅಲ್ಪಸಂಖ್ಯಾತೆ ಅಕ್ಕೈ ಪದ್ಮಶಾಲಿ, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಎಐಡಿಡಬ್ಲ್ಯೂಎ ವಿಮಲಾ ಕೆ.ಎಸ್., ಸಿಪಿಎಂಎಲ್‍ನ ಕ್ಲಿಫ್ಟನ್, ಚಿಂತಕರಾದ ಶ್ರೀಪಾದ್ ಭಟ್, ಶಿವಸುಂದರ್‌, ಎನ್‍ಎಫ್‍ಐಡಬ್ಲ್ಯೂ ಜ್ಯೋತಿ, ಸ್ತ್ರೀ ಜಾಗೃತಿ ಸಮಿತಿಯ ಗೀತಾ ಮೆನಾನ್, ಎಪಿಸಿಆರ್ ನ ಮೊಹಮ್ಮದ್ ಪೀರ್, ನಾವೆದ್ದು ನಿಲ್ಲದಿದ್ದರೆ ಸಂಘಟನೆಯ ಮಮತಾ ಯಜಮಾನ್, ಫಾ.ವಿನೋದ್ ಮಸ್ಕರಾನ್ಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾನೂನು ಬಾಹಿರ ಎಸ್‍ಐಆರ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರದ ನಿಲುವು, ಪಾತ್ರದ ಬಗ್ಗೆ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಬೇಕು ಮತ್ತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಸಿಇಒ-ಕೆ ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳ ನಡುವೆ ಸಭೆ ನಡೆಸಿ, ನಾಗರಿಕ ಸಮಾಜ ಎತ್ತಿರುವ ಎಲ್ಲ ಆತಂಕಗಳಿಗೆ ಉತ್ತರ ನೀಡಬೇಕು. ಎಸ್‍ಐಆರ್ ನಡೆಯಲಿ, ನಡೆಯದಿರಲಿ ಜನರಿಗೆ ದಾಖಲೆಗಳು ಅಗತ್ಯ. ಆದುದರಿಂದ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ ಜಾತಿ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

ಇದಕ್ಕಾಗಿ ಕಂದಾಯ ಇಲಾಖೆ, ನಗರಾಡಳಿತ ಇಲಾಖೆ ಹಾಗೂ ಆರ್‍ಡಿಪಿಆರ್ ಇಲಾಖೆ ಸಮನ್ವಯದಿಂದ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಎಸ್‍ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದ ಯಾವುದೇ ಅರ್ಹ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಂಡರೆ, ಅದರ ಹೊಣೆಗಾರಿಕೆಯನ್ನು ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿ ಮೇಲೆ ನಿಗದಿಪಡಿಸುವಂತೆ ರಾಜ್ಯ ಸರಕಾರ ತೀರ್ಮಾನ ಅಂಗೀಕರಿಸಿ ಅಗತ್ಯ ಆದೇಶಗಳನ್ನು ಹೊರಡಿಸಬೇಕು ಎಂದು ಹೇಳಿದರು.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಎಸ್‍ಐಆರ್ ಕುರಿತು ಇರುವ ಸಮಸ್ಯೆಗಳು ಜನರಿಗೆ ಅರ್ಥವಾಗುವಂತೆ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಹೊಸತನದ ಜಾಗೃತಿ ಅಭಿಯಾನ ನಡೆಸುವುದು ಅಗತ್ಯ. ಸಂಘಟನೆ ಎಸ್‍ಐಆರ್ ವಿರೋಧಿಸಿ ಮೇ30 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ನನ್ನ ಮತ ನನ್ನ ಹಕ್ಕು ಸಂಘಟನೆ ಭಾಗವಹಿಸುತ್ತದೆ ಎಂದು ಸ್ಪಷ್ಟನೆ ನೀಡಿತು. ಈ ವೇಳೆಯಲ್ಲಿ ಎಸ್‍ಐಆರ್ ಕುರಿತು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News