ಬೆಂಗಳೂರು : ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಯವರ ಕುರಿತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಸಚಿವರು ಮನಸೋ ಇಚ್ಛೆ ಟೀಕೆಗಳನ್ನು ಮಾಡಿಕೊಂಡು ಮಾತನಾಡಿದ್ದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುರುವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹಾಗೂ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೋದಿಯವರು ಕರ್ನಾಟಕಕ್ಕೆ ನಾಳೆ(ನ.13) ಆಗಮಿಸಲಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆಯವರ ಹೇಳಿಕೆಗಳನ್ನು ನಿನ್ನೆ ಗಮನಿಸಿದ್ದೇನೆ. ನನಗೆ ಇದರ ಕುರಿತು ಆಕ್ರೋಶವೂ ಬಂತು, ಬೇಸರವೂ ಆಗಿದೆ ಎಂದು ನುಡಿದರು.

ಸತ್ಯಕ್ಕೆ ದೂರ: ‘ಕರ್ನಾಟಕಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ; ನನ್ನ ಭಾಷಣ ಕಟ್’ ಎಂದು ಸಚಿವ ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ. ಕೃಷ್ಣಬೈರೇಗೌಡರೇ ನೀವು ಸಚಿವರಿರಬಹುದು. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದೇ ಪ್ರಧಾನಿ ಬೆಂಗಳೂರಿಗೆ ಯೆಲ್ಲೋ ಮೆಟ್ರೊ ಲೈನ್ ಉದ್ಘಾಟನೆಗೆ ಬಂದಿದ್ದರು. ಅಂದಿನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಭಾಷಣಕ್ಕೆ ಅವಕಾಶ ಸಿಕ್ಕಿರಲಿಲ್ಲ. ಸಿದ್ದರಾಮಯ್ಯನವರು ಭಾಷಣ ಮಾಡಿದ್ದರು. ಬೆಂಗಳೂರು ಅಭಿವೃದ್ಧಿ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ ನಿಮ್ಮ ಭಾಷಣ ರದ್ದು ಮಾಡಿದ್ದಾಗಿ ಟ್ವೀಟ್ ಮಾಡಿದ್ದು ಸತ್ಯಕ್ಕೆ ದೂರ ಎಂದು ತಿಳಿಸಿದರು.

ಎಷ್ಟು ಸಾವಿರ ಕೋಟಿ ಕೊಟ್ಟಿದ್ದೀರಿ?: ‘ಬೆಂಗಳೂರಿನ ಅಭಿವೃದ್ಧಿ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ. ಸ್ವಾಮೀ ಕೃಷ್ಣಬೈರೇಗೌಡರೇ, ಮೂರೂವರೆ ವರ್ಷದಲ್ಲಿ ಬೆಂ.ನಗರದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ?, ಈ ನಗರದ ಅಭಿವೃದ್ಧಿಗೆ ಎಷ್ಟು ಸಾವಿರ ಕೋಟಿ ರೂ. ಕೊಟ್ಟಿದ್ದೀರಿ ಎಂದು ಬಹಿರಂಗಪಡಿಸಬೇಕು ಎಂದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor