Aurad | ಗಡಿಭಾಗದಲ್ಲಿ ಪಟ್ಟದೇವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ : ತಹಶೀಲ್ದಾರ್ ಮಹೇಶ್ ಪಾಟೀಲ್
ಔರಾದ್: ಭಾಲ್ಕಿಯ ಪಟ್ಟದೇವರು ಗಡಿಭಾಗದಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ತಹಸೀಲ್ದಾರ್ ಮಹೇಶ್ ಪಾಟೀಲ್ ಹೇಳಿದರು.
ತಾಲೂಕಿನ ಸಂತಪೂರ್ ಅನುಭವ ಮಂಟಪದಲ್ಲಿ ಆಯೋಜಿಸಿದ್ದ 103ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂತಪೂರ್‌ನ ಸಿದ್ದರಾಮೇಶ್ವರ್ ಕಾಲೇಜು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ಕಳೆದ ಎಂಟು ವರ್ಷಗಳಿಂದ ಶೇ.100 ಫಲಿತಾಂಶ ಸಾಧಿಸುತ್ತಿದೆ. ಅನುಭವ ಮಂಟಪ ಗುರುಕುಲ ಪ್ರೌಢಶಾಲೆಯೂ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವುದರ ಜೊತೆಗೆ ಕಳೆದ 16 ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸುತ್ತಿರುವುದು ಭಾಲ್ಕಿ ಪಟ್ಟದೇವರ ಶೈಕ್ಷಣಿಕ ಸೇವೆಯ ಫಲವಾಗಿದೆ ಎಂದು ಪ್ರಶಂಸಿಸಿದರು.
ಗುರುಬಸವ ಪಟ್ಟದೇವರು ಮಾತನಾಡಿ, ಪ್ರತಿಯೊಬ್ಬರೂ ಸುಖ, ಶಾಂತಿ, ನೆಮ್ಮದಿ ಮತ್ತು ಸಮಾಧಾನದಿಂದ ಬದುಕಬೇಕಾದರೆ ಸತ್ಸಂಗದಲ್ಲಿ ಭಾಗವಹಿಸಬೇಕು. ಜ್ಞಾನಕ್ಕೆ ಇಡೀ ಜಗತ್ತೇ ತಲೆಬಾಗುತ್ತದೆ. ವಿದ್ಯಾರ್ಥಿಗಳು ಜ್ಞಾನದ ರತ್ನಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಈ ವೇಳೆ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರತಿಕಾಂತ್ ಸ್ವಾಮಿ ಹಾಗೂ ಡಾ.ಸಂಜೀವಕುಮಾರ್ ಜುಮ್ಮಾ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜಕುಮಾರ್ ಮಾಳಗೆ, ಡಾ. ಅಭಿಷೇಕ್ ಸ್ವಾಮಿ, ಪ್ರಾಂಶುಪಾಲ ನವೀಲಕುಮಾರ್ ಉತ್ಕಾರ್, ಶಿವಕುಮಾರ್ ಹಿರೇಮಠ್, ಸಂಗಮೇಶ್ ಬ್ಯಾಳೆ ಹಾಗೂ ಗೋವಿಂದ್ ರೆಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಇತರರು ಇದ್ದರು.