ಬಸವಕಲ್ಯಾಣ | ಮಹಿಳೆಯರಿಂದ ಅಕ್ರಮ ಸರಾಯಿ ತಡೆಗೆ ಶಾಸಕ ಶರಣು ಸಲಗರ್ಗೆ ಮನವಿ
ಬಸವಕಲ್ಯಾಣ: ತಾಲೂಕಿನ ಯದಲಾಪುರ್ ಗ್ರಾಮದಲ್ಲಿ ಅಕ್ರಮ ಸರಾಯಿ ಮಾರಾಟ ಹೆಚ್ಚಾಗಿದ್ದು, ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ತಡೆಗಟ್ಟಬೇಕು ಎಂದು ಗ್ರಾಮದ ಮಹಿಳೆಯರು ಶಾಸಕ ಶರಣು ಸಲಗರ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಹಿಳೆಯರು, ಮನೆಯ ಪುರುಷರು ಸರಾಯಿ ಕುಡಿದು ಗಲಾಟೆ ಮಾಡುತ್ತಿದ್ದು, ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ. ಅಕ್ರಮ ಮದ್ಯ ಮಾರಾಟದಿಂದ ಮಹಿಳೆಯರು ಮತ್ತು ಮಕ್ಕಳ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಅಳಲು ತೋಡಿಕೊಂಡರು.
ಮಹಿಳೆಯರ ಮನವಿಗೆ ಪ್ರತಿಕ್ರಿಯಿಸಿದ ಶಾಸಕ ಶರಣು ಸಲಗರ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಮದ್ಯ ನಿಷೇಧ ಮಾಡುವ ಮನಸ್ಸು ಅವರಿಗಿಲ್ಲ. ಸರ್ಕಾರಕ್ಕೆ ಕೇವಲ ಆದಾಯವೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ಇನ್ನೂ ಒಂದೂವರೆ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಹಾಗೂ ಮದ್ಯ ಬಂದ್ ಮಾಡಲು ಪ್ರಯತ್ನಿಸುವುದಾಗಿ ಮಹಿಳೆಯರಿಗೆ ಭರವಸೆ ನೀಡಿದರು.