Bidar | ಇಂಧನ ದರ ಏರಿಕೆ ಖಂಡಿಸಿ ಆಮ್ ಆದ್ಮಿ ಪಾರ್ಟಿ ಮನವಿ
ಬೀದರ್ : ಪಂಚರಾಜ್ಯಗಳ ಚುನಾವಣೆ ಮುಗಿದ ತಕ್ಷಣ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರೂ. ನಷ್ಟು ಹೆಚ್ಚಿಸಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ ಪಕ್ಷದ ಮುಖಂಡರು, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇಂಧನ ದರ ಏರಿಕೆ ಮತ್ತೊಂದು ದೊಡ್ಡ ಹೊಡೆತವಾಗಿದೆ ಎಂದು ಆರೋಪಿಸಿದ್ದಾರೆ.
ಅಡುಗೆ ಅನಿಲದ ಬೆಲೆ ಹೆಚ್ಚಳದಿಂದ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೋಟೆಲ್ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದ್ದು, ಅನೇಕ ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ದಿನನಿತ್ಯದ ಖರ್ಚು ಹೆಚ್ಚುತ್ತಿರುವ ಹಿನ್ನೆಲೆ ಸಾಮಾನ್ಯ ಜನರ ಬದುಕು ಸಾಗಿಸುವುದೇ ಕಷ್ಟಕರವಾಗಿದೆ ಎಂದು ಹೇಳಿರುವ ಪಕ್ಷದ ಮುಖಂಡರು, ಕೇಂದ್ರ ಸರ್ಕಾರ ತಕ್ಷಣವೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ನಿಯಂತ್ರಿಸಿ ಜನರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂಧನ ಮೇಲಿನ ತೆರಿಗೆ ಕಡಿತಗೊಳಿಸಿ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದು ಫೂಲಾರಿ, ಉಪಧ್ಯಕ್ಷ ರಾಜಕುಮಾರ ಎನ್. ಪಾಟೀಲ್ ಬಾವಗಿ, ಪ್ರಧಾನ ಕಾರ್ಯದರ್ಶಿ ಎಂ.ಡಿ. ಜಾವೀದ್, ವೆಂಕಟರಾವ್ ಹಿಂಡಾ, ನಂದಿಬಸವ ಪಾಟೀಲ್, ಡಿ.ಕೆ. ಯೋಹಾನ್, ಕಾಂಟೇಪ್ಪಾ ಗುಪ್ತಾ ಹಾಗೂ ಓಂಕಾರ್ ಉಪಸ್ಥಿತರಿದ್ದರು.