×
Ad

ಬೀದರ್ | ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಅಖಿಲ ಭಾರತ ಕಿಸಾನ್ ಸಭಾ ಮನವಿ

Update: 2025-08-22 19:08 IST

ಬೀದರ್ : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮತ್ತು  ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಮಂಡಳಿಯು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದೆ.

ಮೇ ತಿಂಗಳಿನಿಂದ ಜಿಲ್ಲೆಯಲ್ಲಿ ಮಳೆ ಬೀಳುತ್ತಿದ್ದು ಅತಿವೃಷ್ಠಿಯಿಂದ ಉದ್ದು, ಹೆಸರು ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿವೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ರೈತರು ಸಾಲದಲ್ಲಿ ಬದುಕಿ ಸಾಲದಲ್ಲೇ ಪ್ರಾಣ ಬಿಡುವ ದುಸ್ಥಿತಿಯನ್ನು ತಡೆಯಬೇಕು. ಕೆಲವು ಬ್ಯಾಂಕುಗಳು ರೈತರ ಸಾಲದ ಕುರಿತು ಕೋರ್ಟ್ ಗಳಲ್ಲಿ ದಾವೆ ಹೂಡಿ ರೈತರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು. ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ರೈತ, ಕೃಷಿಕರ ಕಲ್ಯಾಣ ಮಂಡಳಿ ರಚಿಸಬೇಕು. ರೈತರಿಗೆ ಬರುವ ಸರಕಾರಿ ಸೌಲಭ್ಯಗಳನ್ನು ಬ್ಯಾಂಕುಗಳು ನೇರವಾಗಿ ಕಡಿತ ಮಾಡುತ್ತಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಹಳ್ಳಿಖೇಡ್(ಬಿ) ಬಿ.ಎಸ್.ಎಸ್.ಕೆ. ಕಾರ್ಖಾನೆಯನ್ನು ಪುನಃ ಪ್ರಾರಂಭಿಸಿ, ಕಾರ್ಮಿಕರಿಗೆ ಬಾಕಿ ನೀಡಬೇಕಿರುವ 35 ಕೋಟಿ ರೂ. ತಕ್ಷಣವೇ ಬಿಡುಗಡೆ ಮಾಡಬೇಕು. ರಸಗೊಬ್ಬರ ವಿತರಣೆಯಲ್ಲಿ ಆಗುತ್ತಿರುವ ಅಕ್ರಮ ತಡೆದು, ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಕ್ರಮ ವಹಿಸಬೇಕು. ರೈತರಿಗೆ ಹಗಲು ವೇಳೆಯಲ್ಲೇ ನಿರಂತರ ವಿದ್ಯುತ್ ಪೂರೈಕೆ ಒದಗಿಸಬೇಕು. ವಿದ್ಯುತ್ ಖಾಸಗೀಕರಣ ಮಸೂದೆ ಹಿಂತೆಗೆದುಕೊಳ್ಳಬೇಕು. ರೈತರ ಮತ್ತು ಕೃಷಿ ಕಾರ್ಮಿಕರ ಎಲ್ಲಾ ಸಾಲಗಳು ಮನ್ನಾ ಮಾಡಬೇಕು. ಸರಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭೆಯ ಮುಖಂಡರಾದ ಬಾಬುರಾವ್ ಹೊನ್ನಾ, ಸೂರ್ಯಕಾಂತ್ ಮದಕಟ್ಟಿ, ನಝೀರ್ ಅಹ್ಮದ್, ಎಂ.ಡಿ. ಶಫಾಯತ್ ಅಲಿ, ಮುಹಮ್ಮದ್ ವಹೀದಮಿಯ್ಯಾ, ಸಂತಪೂರ್ ಜೈಶೀಲಾ, ಮುನಿರೋದ್ದೀನ್, ಮೋತಿರಾಮ್, ಪ್ರಭು ತಗಣಿಕರ್, ರಾಮಣ್ಣಾ, ಶೀಲ ಸಾಗರ್ ಹಾಗೂ ಸುಜನಾ ರಾಣಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News