Bidar | ಬಸವಕಲ್ಯಾಣ ನಗರಸಭೆಯಲ್ಲಿ ನಕಲಿ ಇ-ಖಾತಾ ಸೃಷ್ಟಿ ಆರೋಪ: ವಿಚಾರಣಾ ವರದಿಯಲ್ಲಿ ಬಹಿರಂಗ
ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ
ಬೀದರ್: ಬಸವಕಲ್ಯಾಣ ನಗರಸಭೆಯ ಪೌರಾಯುಕ್ತ ರಾಜು ಡಿ.ಬಣಕಾರ, ಪ್ರಭಾರ ಕಂದಾಯ ಅಧಿಕಾರಿ ಸುನಿಲಕುಮಾರ್ ವೀರಶೆಟ್ಟಿ ಹಾಗೂ ಪ್ರಭಾರ ಶಾಖಾ ಕಂದಾಯ ನಿರೀಕ್ಷಕ ಸೂರ್ಯಕಾಂತ್ ಅವರು ನಕಲಿ ಸ್ವತ್ತು ಖಾತೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂಬ ಆರೋಪ ಬಸವಕಲ್ಯಾಣದ ಸಹಾಯಕ ಆಯುಕ್ತರ ವಿಚಾರಣಾ ವರದಿಯಲ್ಲಿ ಬಹಿರಂಗವಾಗಿದೆ.
ಬಸವಕಲ್ಯಾಣ ನಗರದಲ್ಲಿ ಸರ್ಕಾರಿ ಜಮೀನು, ಗಾರ್ಡನ್, ಪಾರ್ಕಿಂಗ್ ಸ್ಥಳಗಳು ಹಾಗೂ ಕೆಲವು ಸರ್ವೆ ನಂಬರ್‌ಗಳ ಜಮೀನುಗಳಿಗೆ ಯಾವುದೇ ಸೇಲ್ ಡೀಡ್, ಆನ್‌ಲೈನ್ ಖಾತಾ ಮತ್ತು ಮ್ಯುಟೇಶನ್ ಇಲ್ಲದೆ ಖಾತೆಗಳನ್ನು ನೀಡಲಾಗಿದೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬಸವಕಲ್ಯಾಣದ ಸಹಾಯಕ ಆಯುಕ್ತ ಪ್ರಕಾಶ್ ಬಿ. ಕುದರಿ ಅವರು ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದು, ಅದರಲ್ಲಿ ಅಕ್ರಮ ಖಾತೆಗಳ ಸೃಷ್ಟಿ ಪ್ರಕರಣ ಬೆಳಕಿಗೆ ಬಂದಿದೆ.
ಬಸವಕಲ್ಯಾಣ ನಗರದ ತ್ರಿಪೂರಾಂತ ಗ್ರಾಮದ ಸರ್ವೆ ನಂ. 135/1ರಲ್ಲಿನ 2 ಎಕರೆ 39 ಗುಂಟೆ ಜಮೀನು, ಬಸವಕಲ್ಯಾಣ ನಗರದ ಸರ್ವೆ ನಂ. 106/ಬಿ ಜಮೀನು, ಬಸವಕಲ್ಯಾಣ ಗ್ರಾಮದ ಸರ್ವೆ ನಂ. 34/9ರಲ್ಲಿನ 4 ಎಕರೆ 16 ಗುಂಟೆ ಜಮೀನು, ತ್ರಿಪೂರಾಂತ ಗ್ರಾಮದ ಸರ್ವೆ ನಂ. 266ರಲ್ಲಿನ 5 ಎಕರೆ ಜಮೀನು ಹಾಗೂ ಸರ್ವೆ ನಂ. 52/1ರ ಜಮೀನುಗಳಿಗೆ ನಗರಸಭೆಯ ಅಧಿಕಾರಿಗಳು ಕಾನೂನುಬಾಹಿರವಾಗಿ ಇ-ಆಸ್ತಿ ಖಾತಾ ಪ್ರತಿಗಳನ್ನು ವಿತರಿಸಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಅಧಿಕಾರ ಹಾಗೂ ಕರ್ತವ್ಯಗಳನ್ನು ದುರುಪಯೋಗಪಡಿಸಿಕೊಂಡು, ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾ ನೀಡುವ ಪ್ರಮಾಣಿತ ಕಾರ್ಯವಿಧಾನ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ನಕಲಿ ಸ್ವತ್ತು ಖಾತೆಗಳನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಸರ್ಕಾರಿ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವುದು ದಾಖಲೆಗಳಿಂದ ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ವಿಚಾರಣಾ ವರದಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಅಕ್ರಮವಾಗಿ ನೀಡಲಾದ ಖಾತೆಗಳು ಹಾಗೂ ಅನುಮತಿಗಳನ್ನು ನಿಯಮಾನುಸಾರ ಪರಿಶೀಲಿಸಿ ರದ್ದುಗೊಳಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.