×
Ad

ಬೀದರ್ | ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಸರಬರಾಜು ಆರೋಪ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2025-08-21 21:11 IST

ಬೀದರ್ : ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮಟ್ಟದ ಆಹಾರ ಧಾನ್ಯಗಳು ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ( ಸ್ವಾಭಿಮಾನಿ ಬಣ) ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬಸವಕಲ್ಯಾಣದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯಕ್ಕೆ ಅಪಾಯಕ್ಕೊಳಪಡಿಸುವ ಆಹಾರ ವಿತರಣೆ ನಡೆಯುತ್ತಿದೆ. ಅವಧಿ ಮುಗಿದ ಎಣ್ಣೆ, ಉಪ್ಪಿನ ಪ್ಯಾಕೇಟ್‌ ಸೇರಿದಂತೆ ಅಹಿತಕರ ಸಾಮಗ್ರಿಗಳು ಪೂರೈಸಲಾಗಿದೆ ಎಂದು ದೂರಲಾಗಿದೆ.

ಈ ವಿಷಯವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಗನವಾಡಿ ಕೇಂದ್ರಗಳು ಹದಗೆಡುತ್ತಿವೆ. ಏಜೆನ್ಸಿ ಮತ್ತು ಅಧಿಕಾರಿಗಳ ಮಧ್ಯೆ ಭ್ರಷ್ಟಾಚಾರ ನಡೆದಿದೆ ಎನ್ನುವ ಶಂಕೆ ಇದೆ ಎಂದು ಆರೋಪಿಸಲಾಗಿದೆ.

ರಾಮನಗರ ತಾಂಡಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಹಾಗೂ ಅವಧಿ ಮುಗಿದ ಆಹಾರ ಪತ್ತೆಯಾಗಿದೆ. ಮಕ್ಕಳು ಗುಣಮಟ್ಟದ ಕೊರತೆಯಿಂದ ಊಟವನ್ನು ತಿನ್ನದೆ ಹಸಿವಿನಿಂದ ವಂಚಿತರಾಗುತ್ತಿದ್ದಾರೆ ಎಂಬ ಆತಂಕ ಎದುರಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಬಸವಕಲ್ಯಾಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಅಮಾನತುಗೊಳಿಸಬೇಕು. ಹಾಗೆಯೇ ಅಂಗನವಾಡಿ ಸಹಾಯಕಿಯರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಕಳಪೆ ಮಟ್ಟದ ಆಹಾರ ಸರಬರಾಜು ಮಾಡುತ್ತಿರುವ ಏಜೆನ್ಸಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬಸವಕಲ್ಯಾಣ ಸಿಡಿಪಿಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷ ಚರಣಜೀತ್ ಆಣದೂರೆ, ತಾಲುಕು ಉಪಾಧ್ಯಕ್ಷ ಸುಧೀರ್ ಕಾಂಬಳೆ, ಮಾಂತೇಶ್ ಗೌರಕರ್, ಸದಸ್ಯರಾದ ಎ.ಡಿ. ಹಾಜಿ, ಅಮರ್ ಮೆರ್ಲಿ, ಧಮ್ಮವೀರ್ ಗೊಡಬೋಲೆ ಹಾಗೂ ಭೀಮಣ್ಣಾ ಮಂದಿರಕರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News