ಬೀದರ್ : ಗಡಿರಾಯಪಳ್ಳಿ ಗ್ರಾಮದಲ್ಲಿ ನೀಲಿ ಧ್ವಜ ಸುಟ್ಟ ಪ್ರಕರಣ; ಶಾಂತಿ ಸಭೆ
ಬೀದರ್ : ಹುಲಸುರ್ ತಾಲೂಕಿನ ಗಡಿರಾಯಪಳ್ಳಿ ಗ್ರಾಮದಲ್ಲಿ ನೀಲಿ ಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ಶಾಂತಿ ಸಭೆ ನಡೆಯಿತು.
ಶಾಂತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು, ಈ ಕೃತ್ಯ ನಡೆಸಿದವರು ಯಾರಾದರೂ ಸರಿ ಸೂಕ್ತ ತನಿಖೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಗ್ರಾಮದ ಜನರು ಸೌಹಾರ್ದತೆಯಿಂದ ಬದುಕಬೇಕು ಎಂದರು.
ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾತನಾಡಿ, ನಿಯಮದ ಪ್ರಕಾರ ಯಾರು ಕೂಡ ಸರ್ಕಾರದ ಜಮೀನು ವಶಕ್ಕೆ ಪಡೆಯುವ ಹಾಗಿಲ್ಲ. ಮಹಾನ ವ್ಯಕ್ತಿಗಳ ಭಾವಚಿತ್ರ ಅಳವಡಿಸುವುದಿದ್ದರೆ ಕಡ್ಡಾಯವಾಗಿ ಸರ್ಕಾರದಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಅನುಮೋದನೆ ಪಡೆಯದೇ ನಾಲ್ಕೈದು ಜನ ಸೇರಿ ಮಹಾತ್ಮರ ಭಾವಚಿತ್ರ ಅಥವಾ ಧ್ವಜ ಅಳವಡಿಸಿದರೆ ಅದಕ್ಕೆ ಅವರೆ ರಕ್ಷಣೆ ಕೂಡ ನೀಡುವುದಿಲ್ಲ. ಹಚ್ಚಿದ ನಂತರ ಅದರ ಪಾಡಿಗೆ ಅದಕ್ಕೆ ಬಿಟ್ಟು ಮನೆಗೆ ಹೋಗುತ್ತೀರಿ. ಹಾಗಾಗಿ ಅದನ್ನು ಅಪವಿತ್ರಗೊಳಿಸಲು ನೀವೇ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದ ಅವರು, ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಮುಕುಲ್ ಜೈನ್ ತಹಶೀಲ್ದಾರ್ ಶಿವಾನಂದ್ ಮೇತ್ರೆ, ಸಿಪಿಐ ಅಲಿಸಾಬ್, ಸಮಾಜ ಕಲ್ಯಾಣ ತಾಲೂಕು ಅಧಿಕಾರಿ ದಿಲೀಪ್, ತಾಲೂಕು ಪಂಚಾಯತ್ ಇಒ ಮಹಾದೇವ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ, ಪಿಎಸ್ಐ, ಪಿಡಿಒ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.