×
Ad

Bidar | ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಗಳ ಸಮನ್ವಯ ಅತ್ಯಗತ್ಯ : ಬಲ್ಲಪ್ಪ ನಂದಗಾಂವೆ

ಅಂತರರಾಜ್ಯ ಗಡಿ ಅಪರಾಧ ಸಮನ್ವಯ ಸಭೆಯ

Update: 2026-07-01 21:31 IST

ಔರಾದ್, ಜು.1: ಕರ್ನಾಟಕ–ಮಹಾರಾಷ್ಟ್ರ–ತೆಲಂಗಾಣ ರಾಜ್ಯಗಳ ಗಡಿ ಭಾಗಗಳಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮೂರು ರಾಜ್ಯಗಳ ಪೊಲೀಸ್ ಇಲಾಖೆಗಳ ನಡುವೆ ನಿರಂತರ ಸಮನ್ವಯ, ತ್ವರಿತ ಮಾಹಿತಿ ವಿನಿಮಯ ಹಾಗೂ ಜಂಟಿ ಕಾರ್ಯಾಚರಣೆ ಅತ್ಯಗತ್ಯ ಎಂದು ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವೆ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಭಾಲ್ಕಿ ಉಪವಿಭಾಗದ ಆಶ್ರಯದಲ್ಲಿ ನಡೆದ ಅಂತರರಾಜ್ಯ ಗಡಿ ಅಪರಾಧ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ಬೀದರ್ ಜಿಲ್ಲೆಯು ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಗಡಿಯನ್ನು ಹೊಂದಿರುವುದರಿಂದ ಗಡಿ ಭಾಗಗಳಲ್ಲಿ ಕಳ್ಳತನ, ಮನೆಗಳ್ಳತನ, ವಾಹನ ಕಳವು, ಜಾನುವಾರು ಕಳ್ಳತನ, ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಸಾಗಣೆ, ಅಕ್ರಮ ಮರಳು ಸಾಗಣೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳನ್ನು ತಡೆಯಲು ಮೂರು ರಾಜ್ಯಗಳ ಪೊಲೀಸ್ ಇಲಾಖೆಗಳು ನಿರಂತರ ಸಂಪರ್ಕದಲ್ಲಿರಬೇಕು ಎಂದು ತಿಳಿಸಿದರು.

ಅಪರಾಧ ನಡೆದ ತಕ್ಷಣ ಸಂಬಂಧಿತ ಪೊಲೀಸ್ ಠಾಣೆಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಆರೋಪಿಗಳ ಚಲನವಲನ, ಶಂಕಿತರ ವಿವರಗಳು ಹಾಗೂ ಕಳುವಾದ ವಾಹನಗಳ ಮಾಹಿತಿ ತ್ವರಿತವಾಗಿ ಹಂಚಿಕೊಂಡರೆ ಅಪರಾಧಿಗಳನ್ನು ಶೀಘ್ರ ಬಂಧಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.

ಗಡಿ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವುದು, ಜಂಟಿ ವಾಹನ ತಪಾಸಣೆ ನಡೆಸುವುದು, ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಬಲಪಡಿಸುವುದು, ಸಿಸಿಟಿವಿ ಕ್ಯಾಮೆರಾಗಳ ಬಳಕೆ ವಿಸ್ತರಿಸುವುದು ಹಾಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಪರಾಧ ನಿಯಂತ್ರಣಕ್ಕೆ ಆದ್ಯತೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಪರಾಧ ಪ್ರಕರಣಗಳು, ತನಿಖೆಯ ಪ್ರಗತಿ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡು, ಗಡಿ ಭಾಗಗಳಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಇನ್ನಷ್ಟು ಪರಿಣಾಮಕಾರಿ ಸಮನ್ವಯ ವ್ಯವಸ್ಥೆ ರೂಪಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಹುಮನಾಬಾದ್ ಡಿವೈಎಸ್ಪಿ ಮಾಡೋಳಪ್ಪ, ಮಹಾರಾಷ್ಟ್ರದ ಉದಗೀರ್ ಪೊಲೀಸ್ ಇನ್ಸ್‌ಪೆಕ್ಟರ್ ಜಗಾನಂದ್ ಬಟವಾಡೆ, ನಿಲಂಗಾ ಡಿವೈಎಸ್ಪಿ ವಿಶಾಲ್ ಎಸ್. ಧೂಮೆ, ದೇಗಲೂರ್ ಡಿವೈಎಸ್ಪಿ ಕಿರಣ್ ಪೋಪುಲಘಾಟ್, ತೆಲಂಗಾಣದ ನಾರಾಯಣಖೇಡ ಡಿವೈಎಸ್ಪಿ ಜೆ. ವೆಂಕಟರಡ್ಡಿ ಸೇರಿದಂತೆ ಗಡಿ ಭಾಗದ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಶಾಜನಿ ಔರಾದ್ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಪಿ. ಬಾಗಾರ್, ಕಾಸರ ಸಿರ್ಸಿ ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಎ. ಗರ್ಜೆ, ದೇವಣಿ ಪೊಲೀಸ್ ಇನ್‌ಸ್ಪೆಕ್ಟರ್ ಎ.ಪಿ. ಕೊಡವಾದ್, ಮರಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಎಂ. ಹುಂಡೆಕರ್, ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಜಿ. ಚವ್ಹಾಣ, ಉದಗೀರ ಗ್ರಾಮೀಣ ಪೊಲೀಸ್ ಇನ್‌ಸ್ಪೆಕ್ಟರ್ ಡಿ.ಡಿ. ಗಡೆ, ಔರಾದ್ ಸಿಪಿಐ ರಘುವೀರಸಿಂಗ್ ಠಾಕೂರ್, ಕಮಲನಗರ ಸಿಪಿಐ ಶ್ರೀಕಾಂತ್ ಅಲ್ಲಾಪುರೆ, ಮೇಹೆಕರ್ ಪಿಎಸ್‌ಐ ಸುದರ್ಶನ್ ರೆಡ್ಡಿ, ಸಂತಪೂರ್ ಪಿಎಸ್‌ಐ ದಿನೇಶ್ ಎಂ.ಪಿ., ಕಮಲನಗರ ಪಿಎಸ್‌ಐ ಆಶಾ ರಾಠೋಡ್, ಹೋಕ್ರಣಾ ಪಿಎಸ್‌ಐ ಉಷಾಬಾಯಿ, ಉದಗೀರ್ ಎಸ್‌ಡಿಪಿಒ ಟಿ.ಎಂ. ಮಮಕಾರ್ ಹಾಗೂ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯ ಮಹೇಶ್ ಪಾಟೀಲ್ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News