ಬೀದರ್: ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆಯ ಬದಲಿಗೆ ಸಂಪೂರ್ಣ ಶೇ. 100ರಷ್ಟು ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ್ ಧನ್ನೂರ್ ಹೇಳಿದರು.

ನಗರದ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ರವಿವಾರ ನಡೆದ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಫಲಕಗಳಲ್ಲಿ ತಮಿಳು ಭಾಷೆಯ ಹೊರತಾಗಿ ಬೇರೆ ಭಾಷೆಯ ಬಳಕೆ ಕಾಣಿಸುವುದಿಲ್ಲ. ಅದೇ ರೀತಿ ಕರ್ನಾಟಕದಲ್ಲಿಯೂ ಎಲ್ಲ ಫಲಕಗಳಲ್ಲಿ ಶೇ. 100ರಷ್ಟು ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ಅಭಿಪ್ರಾಯಪಟ್ಟರು.

ಡಾ. ಬಿ.ಬಿ. ಪೂಜಾರ್ ಮಾತನಾಡಿ, ನಾವು ಉತ್ತಮವಾಗಿ ಮಾತನಾಡುವುದನ್ನು ಕಲಿಯಬೇಕು. ಹಳೆಗನ್ನಡ ಮತ್ತು ನಡುಗನ್ನಡದ ಬಗ್ಗೆಯೂ ಅರಿವು ಹೊಂದಿರಬೇಕು. ಸಾಹಿತ್ಯವು ನಮಗೆ ಉತ್ತಮವಾಗಿ ಮಾತನಾಡಲು ಹಾಗೂ ಬದುಕಲು ಕಲಿಸುತ್ತದೆ. ಸಾಹಿತ್ಯ ಇಲ್ಲದಿದ್ದರೆ ನಾವು ಸತ್ತಂತೆ ಎಂದು ತಿಳಿಸಿದರು.

ಸಾಹಿತ್ಯ ಕೃತಿಗಳನ್ನು ರಚಿಸಿದವರನ್ನು ಅವರು ಏನು ಬರೆದಿದ್ದಾರೆ ಎಂದು ಕೇಳಬೇಕು. ಆಗ ಅವರು ಉತ್ಸಾಹದಿಂದ ತಮ್ಮ ಬರವಣಿಗೆಯ ಬಗ್ಗೆ ಹೇಳುತ್ತಾರೆ. ಇದರಿಂದ ಸಾಹಿತ್ಯ ಬೆಳೆಯಲು ಸಾಧ್ಯವಾಗುತ್ತದೆ. ವಚನ ಸಾಹಿತ್ಯ ಓದಿದವರು ಅನಿಷ್ಟ ಪದ್ಧತಿಗಳನ್ನು ಅನುಸರಿಸುವುದಿಲ್ಲ ಹಾಗೂ ದುಶ್ಚಟಗಳಿಗೆ ಬಲಿಯಾಗುವುದಿಲ್ಲ. ಜ್ಞಾನ ನೀಡುವುದು ಸಾಹಿತ್ಯ ಮಾತ್ರ ಎಂದು ಹೇಳಿದರು.

ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿ, ದೇಶದಲ್ಲಿ ಬಹುತ್ವಕ್ಕೆ ಅಪಾಯ ಎದುರಾಗಿದೆ. ನಾವು ಬಹುತ್ವವನ್ನು ಉಳಿಸದಿದ್ದರೆ ದೇಶ, ರಾಜ್ಯ ಹಾಗೂ ಜನಜೀವನದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಆದರೆ, ಈ ಕುರಿತು ಗಂಭೀರ ಚಿಂತನೆ ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತದಲ್ಲಿ ಹಿಂದೂ ಧರ್ಮವೊಂದೇ ಇರಬೇಕು, ಕ್ರೈಸ್ತ, ಇಸ್ಲಾಂ, ಲಿಂಗಾಯತ, ಬೌದ್ಧ, ಸಿಖ್ ಸೇರಿದಂತೆ ಇತರ ಧರ್ಮಗಳಿಗೆ ಅವಕಾಶ ಇರಬಾರದು ಅಥವಾ ಅವುಗಳ ಅನುಯಾಯಿಗಳು ಎರಡನೇ ದರ್ಜೆಯ ನಾಗರಿಕರಾಗಿ ಬದುಕಬೇಕು ಎಂಬ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಸುಪ್ರೀಂ ಕೋರ್ಟ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ಹಿಂದೂ ಧರ್ಮದ ಕುರಿತು ನಡೆಯುತ್ತಿರುವ ಪ್ರತಿಪಾದನೆ ದೇಶದಲ್ಲಿ ಅಪಾಯದ ಮುನ್ಸೂಚನೆಯಾಗಿದೆ ಎಂದು ಹೇಳಿದರು.

ಎಸ್‌ಐಆರ್ ಮೂಲಕ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಆ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಹಿಂದೂ ಧರ್ಮದ ನಿರ್ದಿಷ್ಟ ಪರಿಕಲ್ಪನೆಯನ್ನು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಎರಡನೇ ದರ್ಜೆಯ ನಾಗರಿಕರಾಗಿ ಬದುಕಬೇಕೆಂಬ ಉದ್ದೇಶ ಇದರ ಹಿಂದಿದೆ ಎಂದು ದೂರಿದರು.

ನಾವು ಯಾರೂ ಹಿಂದೂ ಧರ್ಮದ ವಿರೋಧಿಗಳಲ್ಲ. ಸ್ವಾಮಿ ವಿವೇಕಾನಂದರು, ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಹಿಂದೂ ಧರ್ಮದ ಕುರಿತು ನಮಗೆ ಸಹಮತವಿದೆ. ಆದರೆ, ಗೋಲ್ವಾಲ್ಕರ್ ಹಾಗೂ ಸಂಘ ಪರಿವಾರ ಪ್ರತಿಪಾದಿಸುವ ಹಿಂದೂ ಧರ್ಮದ ಪರಿಧಿಯಲ್ಲಿ ನಾವಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 15 ಸಾವಿರ ಸದಸ್ಯರಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಯೊಬ್ಬ ಸದಸ್ಯರು ತಲಾ 100 ರೂ. ನೀಡಿದ್ದರೂ ಸಮ್ಮೇಳನ ನಡೆಸಲು ಅಗತ್ಯವಾದ ಹಣ ಸಂಗ್ರಹವಾಗುತ್ತಿತ್ತು. ಆಗ ಭ್ರಷ್ಟ ರಾಜಕಾರಣಿಗಳು ಅಥವಾ ಗುತ್ತಿಗೆದಾರರ ಬಳಿ ಹಣ ಕೇಳುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಾದರೂ ಈ ವಿಚಾರವನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಬಸವರಾಜ್ ಬಲ್ಲೂರ್, ಅವರ ಪತ್ನಿ ವಿದ್ಯಾವತಿ ಬಲ್ಲೂರ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಚೆನ್ನಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ವಿಜಯಕುಮಾರ್ ಸೋನಾರೆ, ದಾನಿ ಬಾಬುರಾವ್, ಡಾ. ರತಿಕಾಂತ್ ವಿ. ಸ್ವಾಮಿ ಸೇರಿದಂತೆ ಅನೇಕ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ 12 ನಿರ್ಣಯಗಳ ಅಂಗೀಕಾರ :

ಸಮ್ಮೇಳನದಲ್ಲಿ ಆಡಳಿತದಲ್ಲಿ ಸಂಪೂರ್ಣ ಕನ್ನಡ ಜಾರಿ, ಗಡಿಭಾಗದ ಕನ್ನಡ ಶಾಲೆಗಳ ಸಬಲೀಕರಣ ಹಾಗೂ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು.

ಕಲ್ಯಾಣ ಕರ್ನಾಟಕದಲ್ಲಿ ಶರಣ ಸಾಹಿತ್ಯ ಮತ್ತು ವಚನ ಸಂಶೋಧನಾ ಕೇಂದ್ರ ಹಾಗೂ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಬೇಕು. ಬೀದರ್-ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ರೈಲು ಮತ್ತು ವಿಮಾನ ಸಂಪರ್ಕವನ್ನು ವೃದ್ಧಿಸಬೇಕು. ಜಿಲ್ಲೆಯ ಸಾಹಿತಿಗಳು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ನಿರ್ಣಯಿಸಲಾಯಿತು.

ಬೀದರ್ ಜಿಲ್ಲೆಯ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಕೃಷಿ ಮತ್ತು ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಹಾಗೂ ಈ ಭಾಗದ ಲೇಖಕರ ಪುಸ್ತಕ ಖರೀದಿಗೂ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಲಾಯಿತು.

ಬೀದರ್ ನಗರದಲ್ಲಿ ನಿರ್ಮಿಸಿರುವ ಕನ್ನಡ ಭವನವು ಕನ್ನಡ ಸಾಹಿತ್ಯ ಪರಿಷತ್ತಿನ ಅಧೀನದಲ್ಲಿಯೇ ಮುಂದುವರಿಯುವಂತೆ ಆದೇಶ ಹೊರಡಿಸಬೇಕು. ಜಿಲ್ಲೆಯ ಪಾರಂಪರಿಕ ಬಿದರಿ ಕಲೆಯನ್ನು ಉಳಿಸಿ ಬೆಳೆಸಲು ಕುಶಲಕರ್ಮಿಗಳಿಗೆ ಕಚ್ಚಾ ವಸ್ತುಗಳ ಸಬ್ಸಿಡಿ, ಆಧುನಿಕ ತರಬೇತಿ ಹಾಗೂ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ನಿರ್ಣಯಿಸಲಾಯಿತು.

ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅದನ್ನು ಬರೆದವರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು. ಉನ್ನತ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ಮ್ಯಾಗ್ನೆಟ್ ಮತ್ತು ಕೆಪಿಎಸ್ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಕೈಬಿಡಬೇಕು ಎಂಬ ನಿರ್ಣಯಗಳನ್ನೂ ಅಂಗೀಕರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ/ವಾರ್ತಾಭಾರತಿ

ಬೀದರ್ ಜಿಲ್ಲಾ ವರದಿಗಾರರು

ಚಿತ್ರಶೇನ ವ್ಹಿ. ಫುಲೆ ಅವರು 2023ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 2025ರಿಂದ ವಾರ್ತಾಭಾರತಿ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿರುವ ಇವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಬೀದರ್ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ