ಬೀದರ್ | ಬಹುವಾರ್ಷಿಕ ಬೆಳೆ ಬೆಳೆಯುವತ್ತ ರೈತರು ಗಮನಹರಿಸಬೇಕು : ಡಾ.ಎಸ್.ವಿ.ಪಾಟೀಲ್
ಬೀದರ್ : ರೈತರು ಬಹುವಾರ್ಷಿಕ ಬೆಳೆಗಳನ್ನು ಬೆಳೆಯುವತ್ತ ಗಮನಹರಿಸಬೇಕು ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಅವರು ತಿಳಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಮಹಾವಿದ್ಯಾಲಯ ಬೀದರ್ ಮತ್ತು ತೋಟಗಾರಿಕೆ ಇಲಾಖೆಯವರ ಸಹಯೋಗದೊಂದಿಗೆ 2025-26 ನೇ ಸಾಲಿನ ಮೊದಲನೆ ತ್ರೈ ಮಾಸಿಕ ತೋಟಗಾರಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಜಮೀನುಗಳಲ್ಲಿ ನೀರಾವರಿ ಸೌಲಭ್ಯ ಹೊಂದಿರುವಂತಹ ರೈತರು ತಾಳೆ ಎಣ್ಣೆ ಬೆಳೆಯಲು ಹೆಚ್ಚು ಒತ್ತು ಕೊಡಬೇಕು. ಇದರಿಂದ ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗುವುದರ ಜೊತೆಗೆ ನಮ್ಮ ದೇಶವು ಹೊರ ದೇಶಗಳಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವುದು ಕ್ರಮೇಣ ಕಡಿತಗೊಳಿಸಿ, ದೇಶದ ಆರ್ಥಿಕತೆ ಸುಧಾರಿಸುವ ನಿಟ್ಟಿನಲ್ಲಿ ತಮ್ಮ ಕೊಡುಗೆ ನೀಡಬಹುದು ಎಂದರು.
ಬೀದರ್ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳ ಬಗ್ಗೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮಗ್ರವಾದ ಮಾಹಿತಿ ಪಡೆದು ರೈತರಿಗೆ ಸೂಕ್ತವಾದಂತ ಸಲಹೆ ಸೂಚನೆಗಳು ಆಯಾ ಕ್ಷೇತ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಒದಗಿಸಬೇಕು ಎಂದು ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ಬಾವುಗೆ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬೀದರ್ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಿಕ ಸುನೀಲ್ ಗಂಗಶ್ರೀ, ಡಾ.ವಿ.ಪಿ. ಸಿಂಗ್, ಡಾ.ಪ್ರಿಯಾಂಕ ಮೂಲಗೆ ಹಾಗೂ ಡಾ.ವಿಜಯ ಮಹಾಂತೇಶ್ ಸೇರಿದಂತೆ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.