ಬೀದರ್ | 2 ಕೋಟಿ ರೂ. ಅಧಿಕ ಮೌಲ್ಯದ ತಂಬಾಕು ಜಪ್ತಿ: 8 ಜನರ ಬಂಧನ
ಬೀದರ್, ಆ.31: ಅಕ್ರಮವಾಗಿ ಸಂಗ್ರಹಿಸಿದ್ದ 2 ಕೋಟಿ ರೂ. ಅಧಿಕ ಮೌಲ್ಯದ ತಂಬಾಕು, ಕೆಮಿಕಲ್ ಸೇರಿದಂತೆ ಕೃತ್ಯಕ್ಕೆ ಬಳಸಿದ ಒಂದು ಲಾರಿ ಜಪ್ತಿ ಮಾಡಿ, 8 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಕಚೇರಿಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಚಿದ್ರಿಯಲ್ಲಿರುವ ಬುತ್ತಿ ಬಸವಣ್ಣ ಹತ್ತಿರದ ಬಾಡಿಗೆ ಮನೆಯೊಂದರಲ್ಲಿ ಆಕ್ರಮವಾಗಿ ಸಂಗ್ರಹಿಸಿಟ್ಟಿದ್ದ ತಂಬಾಕು ವಸ್ತುಗಳ ಕಲಬೆರಕೆ ಗುಟಕಾ ಸಾಮಗ್ರಿ, ಪಾನ್ ಮಸಾಲಾವನ್ನು ಲಾರಿಯೊಂದರಲ್ಲಿ ಲೋಡ್ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 1,51,59,775 ರೂ. ಮೌಲ್ಯದ ಗುಟಕಾ ತಯಾರಿಸುವ ವಿವಿಧ ಸಾಮಗ್ರಿ ಗಳು ಹಾಗೂ 25 ಲಕ್ಷ ರೂ.ಮೌಲ್ಯದ ಲಾರಿ ಜಪ್ತಿ ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಅದೇ ರೀತಿ ಕೋಳಾರ್ ಕೈಗಾರಿಕಾ ಪ್ರದೇಶದಲ್ಲಿ ಪಾನ್ ಮಸಾಲಾ, ಕೆಮಿಕಲ್ ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 43,30,750 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರದೀಪ್ ಗುಂಟಿ ತಿಳಿಸಿದರು.
ಒಟ್ಟು 2,19,90,525 ರೂ. ಮೌಲ್ಯದ ವಸ್ತುಗಳು ಜಪ್ತಿ ಮಾಡಿಕೊಂಡಿದ್ದು, 8 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದರ ಮಾಲಕ ಬೀದರ್‌ನವರೆ ಆಗಿದ್ದಾರೆ ಎಂಬ ಮಾಹಿತಿ ಇದ್ದು, ಅವರನ್ನು ತಕ್ಷಣವೇ ಬಂಧಿಸಲಾಗುವುದು. ಗಾಂಧಿ ಗಂಜ್ ಪೊಲೀಸ್ ಠಾಣೆ ಹಾಗೂ ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.