ಬೀದರ್ | ಆ.16 ರಂದು ಒಳಮೀಸಲಾತಿ ಜಾರಿ ಮಾಡಬೇಕು : ಅಭಿ ಕಾಳೆ
ಬೀದರ್ : ಕೊಟ್ಟ ಮಾತಿನಂತೆ ಸಿಎಂ ಸಿದ್ಧರಾಮಯ್ಯನವರು ಆ.16 ರಂದು ಒಳಮೀಸಲಾತಿ ಜಾರಿ ಮಾಡಬೇಕು ಎಂದು ಡಾ.ಬಾಬು ಜಗಜೀವನರಾಮ್ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಭಿ ಕಾಳೆ ಅವರು ಒತ್ತಾಯಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 30ರಿಂದ 35 ವರ್ಷಗಳಿಂದ ಒಳಮೀಸಲಾತಿ ಜಾರಿಗಾಗಿ ನಮ್ಮ ಹಿರಿಯರು ನಿರಂತರವಾಗಿ ತಮಟೆ ಚಳುವಳಿ, ಅರೆಬೆತ್ತಲೆ ಮೆರವಣಿಗೆ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಸೇರಿದಂತೆ ಹಲವಾರು ರೀತಿಯ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇದೀಗ ಮುಂಗಾರು ಅಧಿವೇಶನ ಆರಂಭದಲ್ಲೇ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಆ.11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿವಿಧ ಮಾದಿಗ ಸಂಘಟನೆಗಳ ಪ್ರಮುಖರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಳಮೀಸಲಾತಿ ಜಾರಿ ಮಾಡುವವರೆಗೆ ಹೋರಾಟ ಮುಂದುವರೆಯಲಿದೆ. ಒಂದು ವೇಳೆ ಜಾರಿ ಮಾಡದಿದ್ದರೆ ರಾಜ್ಯದಾದ್ಯಂತ ಬಿಸಿ ವಾತಾವರಣ ಮುಂದುವರೆಯಲಿದೆ. ಆದ್ದರಿಂದ ಜಿಲ್ಲೆಯ ಮಾದಿಗ ಸಮಾಜದ ಹಾಗೂ ಅದರ ಉಪ ಜಾತಿಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಅಹೋರಾತ್ರಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಮಿತಿಯ ಗೌರವಾಧ್ಯಕ್ಷ ಸಿ.ಎಂ.ದಾಸ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಆದಿ ಜಾಂಬವ ಸಮಾಜ ಸಂಘಟನೆಯ ಜಿಲ್ಲಾಧ್ಯಕ್ಷ ಸಂಜೀವಕುಮಾರ ಬೇಂದ್ರೆ, ಸಮಿತಿಯ ಕಾರ್ಯದರ್ಶಿ ಜಿ.ಎಂ. ಕ್ರಿಸ್ಟೋಫರ್, ರೋಸೆನ್ ಮಲ್ಕಾಪುರ್ ಹಾಗೂ ಸಮಿತಿಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೀಮನ್ ಕಾಳೆ ಉಪಸ್ಥಿತರಿದ್ದರು.