Bidar | ಅಕ್ರಮ ಚಟುವಟಿಕೆಯಲ್ಲಿ ಭಾಗಿ ಆರೋಪ: ರೌಡಿಶೀಟರ್ ಗಡಿಪಾರು
ಸಂಜೀವ ಕುಮಾರ್
ಬೀದರ್: ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮಟಕಾ ಜೂಜಾಟ, ಕೊಲೆಗೆ ಯತ್ನ, ಆಕ್ರಮ ಮಾದಕ ದ್ರವ್ಯ ಗುಳಿಗೆಗಳ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರ, ಯುವಕರ, ವಿದ್ಯಾರ್ಥಿಗಳ ಆರೋಗ್ಯ ಹಾನಿಪಡಿಸುತ್ತಿರುವ ಆರೋಪದಲ್ಲಿ ರೌಡಿಶೀಟರ್ ಓರ್ವನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಭಾಲ್ಕಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜನತಾ ಕಾಲೋನಿಯ ನಿವಾಸಿ ಸಂಜೀವ ಕುಮಾರ್ ಗಡಿಪಾರಾದ ರೌಡಿಶೀಟರ್. ಭಾಲ್ಕಿ ಪಟ್ಟಣದಲ್ಲಿ ಮಟಕಾ ಜೂಜಾಟ, ಕೊಲೆಗೆ ಯತ್ನ, ಆಕ್ರಮ ಮಾದಕ ದ್ರವ್ಯ ಗುಳಿಗೆಗಳ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರ, ಯುವಕರ, ವಿದ್ಯಾರ್ಥಿಗಳ ಆರೋಗ್ಯ ಹಾನಿಪಡಿಸುತ್ತಿದ್ದ. ಮಟ್ಕಾ ಜೂಜಾಟವೇ ತನ್ನ ಪ್ರಧಾನ ಕಾರ್ಯ ಮಾಡಿಕೊಂಡು ಭಾಲ್ಕಿಯ ಸುತ್ತಮುತ್ತಲಿನ ಗ್ರಾಮದಲ್ಲಿ ಮಟ್ಕಾ, ಜೂಜಾಟ ನಡೆಸುತ್ತಿದ್ದು, ಬಡ ಕೂಲಿ ಕಾರ್ಮಿಕರು, ವ್ಯವಸಾಯ ಮಾಡುವವರು ಮತ್ತು ಸಣ್ಣಪುಟ್ಟ ವ್ಯಾಪಾರ ಮಾಡುವವರನ್ನು ಮೋಸ ಮಾಡುತ್ತಿದ್ದನು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಮಾಯಕ ಜನರನ್ನು ಹೆದರಿಸಿ ಕೊಲೆಗೆ ಯತ್ನ ಪ್ರಕರಣಗಳಲ್ಲಿ ಸಹ ಭಾಗಿಯಾಗಿರುವುದರಿಂದ ಇತನ ಮೇಲೆ ಸುಮಾರು 4 ಪ್ರಕರಣಗಳು ದಾಖಲಾಗಿವೆ. ಆದರೂ ಸಹ ತನ್ನ ಅಪರಾಧಿಕ ಕೃತ್ಯಗಳಿಂದ ವಿಮುಖನಾಗದೆ ತನ್ನ ಕಾನೂನು ಬಾಹಿರ ಪ್ರವೃತಿಯನ್ನು ಮುಂದುವರೆಸಿ ಸಮಾಜದಲ್ಲಿ ಶಾಂತಿ ಪಾಲನೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದನು. ಆದ್ದರಿಂದ ಈತನನ್ನು ಬೀದರ್ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾನೂನು ವಿರುದ್ಧ ಚಟುವಟಿಕೆಯಲ್ಲಿ ಭಾಗಿಯಾಗಿ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅಡೆತಡೆಯನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಹಾಗೂ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದ ಅವರು, ನಾಗರಿಕರು ಯಾವುದೇ ಕಾನೂನು ವಿರುದ್ಧ ಚಟುವಟಿಕೆಯಲ್ಲಿ ಭಾಗಿಯಾಗಿ ತನ್ನ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದ್ದಾರೆ.