ಬೀದರ್ | ಅತಿವೃಷ್ಟಿ ಪೀಡಿತ ಪ್ರದೇಶದ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಿಸಲಿ : ಶಾಸಕ ಪ್ರಭು ಚೌವ್ಹಾಣ್
ಬೀದರ್ : ಅತಿವೃಷ್ಟಿ ಪೀಡಿತ ಪ್ರದೇಶದ ಪ್ರತಿ ಎಕರೆಗೆ ಸರಕಾರದಿಂದ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಒತ್ತಾಯಿಸಿದರು.
ಇಂದು ಔರಾದ್ (ಬಿ) ಹಾಗೂ ಕಮಲಗನರ ತಾಲ್ಲೂಕಿನ ಗ್ರಾಮಗಳಾದ ನಾಮಾನಾಯಕ್ ತಾಂಡಾ, ಬಾವಲಗಾಂವ, ಚೊಂಡಿಮುಖೇಡ್, ಚಿಕ್ಲಿ(ಯು) ತಾಂಡಾ, ಅಕನಾಪೂರ, ಗಂಗನಬೀಡ, ದಾಬಕಾ, ಮುತಖೇಡ್, ನಂದಿ ಬಿಜಲಗಾಂವ, ಚಿಮ್ಮೇಗಾಂವ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಮಳೆಯಿಂದಾದ ಹಾನಿಯನ್ನು ಅವರು ಪರಿಶೀಲಿಸಿದರು.
ಒಂದೇ ದಿನ 300 ಎಂ.ಎಂ ಮಳೆಯಾಗಿದ್ದರಿಂದ ನೀರಿನ ರಭಸಕ್ಕೆ ಕೆರೆ ಕಟ್ಟೆಗಳು, ಸೇತುವೆಗಳು ಒಡೆದು ತೀವ್ರ ಹಾನಿಯಾಗಿದೆ. ಕಾಲುವೆಗಳ ನೀರು ಕೃಷಿ ಭೂಮಿಗಳಿಗೆ ನುಗ್ಗಿ ಬಹಳಷ್ಟು ಹಾನಿಯಾಗಿದೆ. ಜಾನುವಾರುಗಳ ಸಾವಾಗಿರುವ ಪ್ರಕರಣಗಳಿಗೆ ಕೂಡಲೇ ಪರಿಹಾರ ವಿತರಿಸಲು ಕ್ರಮ ವಹಿಸಬೇಕು. ಹಾನಿಯಾಗಿರುವ ರಸ್ತೆ, ಕೆರೆ ಮತ್ತು ಸೇತುವೆಗಳ ದುರಸ್ಥಿ ಅಥವಾ ಪುನರ್ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಬೆಳೆ ಹಾನಿಯ ಕುರಿತು ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಹಾನಿಯಾದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ವರದಿ ಸಲ್ಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷವಹಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಔರಾದ್ (ಬಿ) ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 10 ಸಾವಿರ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿಯಾಗಿದೆ. ಪ್ರತಿ ಎಕರೆಗೆ ಸುಮಾರು 25 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ನಾನು ನಿಮ್ಮೊಂದಿಗಿದ್ದು ಯಾವುದೇ ಕಾರಣಕ್ಕೂ ಆತಂಕಪಡಬಾರದು ಎಂದು ರೈತರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಔರಾದ್ (ಬಿ) ತಹಸೀಲ್ದಾರ್ ಮಹೇಶ್ ಪಾಟೀಲ್, ಕಮಲನಗರ ತಹಸೀಲ್ದಾರ್ ಅಮಿತಕುಮಾರ್ ಕುಲಕರ್ಣಿ, ಔರಾದ ಹಾಗೂ ಕಮಲಗನರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ಹಣಮಂತ್ ಕೌಟಗೆ, ಪಂಚಾಯತ್ ರಾಜ್ ಇಲಾಖೆಯ ಎಇಇ ಸುನೀಲ್ ಚಿಲ್ಲರ್ಗೆ, ಲೋಕೋಪಯೋಗಿ ಇಲಾಖೆಯ ಎಇಇ ಪ್ರೇಮಸಾಗರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಮಾರುತಿ ರಾಠೋಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.