×
Ad

ಬೀದರ್ | ಬಿಎಸ್‌ಎಸ್‌ಕೆ ಕಾರ್ಖಾನೆ ಪುನರ್ ಆರಂಭಿಸಲು ಸುಭಾಷ್ ಕಲ್ಲೂರ್ ಒತ್ತಾಯ

Update: 2025-09-04 19:03 IST

ಬೀದರ್ : ಬಿಎಸ್‌ಎಸ್‌ಕೆ ಕಾರ್ಖಾನೆ ಆರಂಭಿಸಬೇಕು ಎಂದು ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಷ್ ಕಲ್ಲೂರ್ ಅವರು ಒತ್ತಾಯಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ನವರಿಗೆ ಸುಮಾರು ಬಾರಿ ಪತ್ರ ಬರೆದು ಬಿಎಸ್‌ಎಸ್‌ಕೆ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಕೋರಲಾಗಿದೆ. ಲೀಝ್‌ನಿಂದ ಬರುವ ಹಣದಿಂದ ಸಾಲ ಪಾವತಿ ಮಾಡಲಾಗುವುದು ಎಂದು ವಿನಂತಿ ಕೂಡ ಮಾಡಲಾಗಿದೆ. ಆದರೆ ನಮ್ಮ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದರು.

ಕಾರ್ಖಾನೆಯು 173.35 ಎಕರೆ ಭೂಮಿ ಹೊಂದಿದೆ. ಅದರಲ್ಲಿ ಸುಮಾರು 141 ಎಕರೆ ಭೂಮಿಯು 2024ರ ಆ.2 ರಂದು ಕಬ್ಜೆ ತೆಗೆದುಕೊಂಡು, 2024ರ ಡಿಸೆಂಬರ್ 16 ರಂದು 184 ಕೋಟಿ ರೂ. ಹರಾಜು ಮಾಡಿದ್ದಾರೆ. ಈ ವಿಷಯವನ್ನು ನಮ್ಮ ಆಡಳಿತ ಮಂಡಳಿಯವರಿಗೂ ತಿಳಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಈಶ್ವರ್ ಖಂಡ್ರೆ ಅವರು ಉಸ್ತುವಾರಿ ಸಚಿವರಾಗಿ, ತಮ್ಮ ಮಗ ಸಂಸದರಾಗಿ, ಅವರ ಸಹೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೂಡಾ ಒಂದು ರೈತರ ಜೀವನಾಡಿ ಬಿಎಸ್‌ಎಸ್‌ಕೆ ಕಾರ್ಖಾನೆ ಆರಂಭ ಮಾಡಲು ಸಾಧ್ಯವಾಗಿದ್ದರೆ ಹೇಗೆ ಎಂದು ಖಾರವಾಗಿಯೇ ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ ಕಾರ್ಖಾನೆಯನ್ನು ಲೀಝ್‌ಗೆ ಪಡೆಯಲು ಬಿಡ್‌ದಾರರು ಬಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಸಕ್ಕರೆ ಸಚಿವರಿಗೆ ಭೇಟಿ ಮಾಡಿ ಮೊದಲಿಗೆ 40 ಕೋಟಿ ರೂ. ಪಾವತಿ ಮಾಡಿ, ನಂತರ ಪ್ರತೀ ವರ್ಷಕ್ಕೆ 8 ಕೋಟಿ ರೂ. ಪಾವತಿಸುವುದಾಗಿ ಹೇಳಿದರೂ ಕೂಡಾ ಉದ್ದೇಶಪೂರ್ವಕವಾಗಿಯೇ ಸಚಿವರು ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮಾರಲು ನಾವು ಬಿಡುವುದಿಲ್ಲ. ಈ ಎಲ್ಲಾ ಸಮಗ್ರ ವಿಷಯಗಳು ರೈತರ ಗಮನಕ್ಕೆ ತರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಉಸ್ತುವಾರಿ ಸಚಿವರು ಕಾರ್ಖಾನೆ ಆರಂಭಕ್ಕೆ ಸಹಕಾರ ನೀಡದಿದ್ದರೆ ರೈತರೊಂದಿಗೆ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ವಿಶ್ವನಾಥ ಪಾಟೀಲ್ ಮಾಡಗೂಳ್, ನಿರ್ದೇಶಕ ಮಲ್ಲಿಕಾರ್ಜುನ್ ಪಾಟೀಲ್ ಚಿಟಗುಪ್ಪ, ಬಕ್ಕಪ್ಪ ಬಸರೆಡ್ಡಿ, ಅಪ್ಪಾರಾವ್ ಡಾಕುಳಗಿ ಹಾಗೂ ರಾಜಪ್ಪ ಶೇರಿಕಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News